ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ | ಸೂಕ್ತ ಪರಿಹಾರ ಒದಗಿಸಿ: ಕುಮಾರಸ್ವಾಮಿ ಸೂಚನೆ

ತ್ರೈಮಾಸಿಕ ಕೆಡಿಪಿ ಸಭೆ
Last Updated 12 ಜನವರಿ 2021, 4:12 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ‘ಫಸಲು ಕೈಗೆ ಸಿಗುವ ವೇಳೆ ಮಳೆ ಸುರಿದಿರುವುದು ಹೆಚ್ಚಿನ ಹಾನಿಗೆ ಕಾರಣವಾಗಿದೆ. ಕೆಲವರು ಗುತ್ತಿಗೆ ಆಧಾರದಲ್ಲಿ ಭತ್ತದ ಗದ್ದೆಗಳನ್ನು ಪಡೆದು, ಗೇಣಿ ಮೂಲಕ ಉಳುಮೆ ಮಾಡುತ್ತಿದ್ದರು. ಭತ್ತ ಸಂಪೂರ್ಣವಾಗಿ ಹಾನಿಯಾಗಿರುವುದರಿಂದ ಗುತ್ತಿಗೆ ನೀಡಿದ ಭತ್ತದ ಗದ್ದೆಯ ಮಾಲೀಕರಿಗೆ ಹಣ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಕಾಫಿ ಅಪಾರ ಪ್ರಮಾಣದಲ್ಲಿ ಉದುರಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೈಜ ಪರಿಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್. ಪ್ರಭಾಕರ್, ಸುಧಾ ಯೋಗೇಶ್ ಧ್ವನಿಗೂಡಿಸಿ, ‘ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳಿಲ್ಲ. ಗ್ರಾಮೀಣ ಭಾಗಕ್ಕೆ ಸಮೀಕ್ಷೆಗೆ ತೆರಳಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ನಾವು ಗ್ರಾಮೀಣ ಪ್ರದೇಶದಲ್ಲಿ ಬೆಳೆ ಹಾನಿ ಬಗ್ಗೆ ಪರಿಶೀಲನೆಗೆ ತೆರಳಿದಾಗ, ಹಲವು ರೈತರು ಅಧಿಕಾರಿಗಳು ಸಮೀಕ್ಷೆಗೆ ಬಂದಿಲ್ಲದ್ದರ ಬಗ್ಗೆ ದೂರಿದ್ದು, ಕೂಡಲೇ ಅಧಿಕಾರಿಗಳ ತಂಡವನ್ನು ಸಮೀಕ್ಷೆಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ಪ್ರೌಢಶಾಲೆಗಳಿಗೆ ಶೇ 66, ಪ್ರಾಥಮಿಕ ಶಾಲೆಗಳಿಗೆ ಶೇ42 ರಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಪ್ರತಿದಿನ ಮಕ್ಕಳ ಹಾಜರಾತಿ ನೀಡಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಪ್ರೌಢಶಾಲೆಯಲ್ಲಿ 54 ಹಾಗೂ ಪ್ರಾಥಮಿಕ ಶಾಲೆಯಲ್ಲಿ 74 ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಮಾಹಿತಿ ನೀಡಿದರು.

‘ನಾಲ್ಕು ಚಕ್ರದ ವಾಹನ ಖರೀದಿಸಿದವರ ಆಧಾರ್ ಸಂಖ್ಯೆ ಸಾರಿಗೆ ಇಲಾಖೆಯಲ್ಲಿ ಲಿಂಕ್ ಪಡೆದು ತಾನಾಗಿಯೇ ಬಿಪಿಎಲ್ ಪಡಿತರ ಚೀಟಿ ರದ್ದಾಗುತ್ತದೆ’ ಎಂದು ಆಹಾರ ನಿರೀಕ್ಷಕ ಬಸವೇಗೌಡ ಮಾಹಿತಿ ನೀಡಿದಾಗ, ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.

‘ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನಿವೇಶನಕ್ಕೆ ಬೇಡಿಕೆಯಿದೆ. ಅಲ್ಲದೆ, ಘನತ್ಯಾಜ್ಯ ವಿಲೇವಾರಿಗೆ ಜಾಗವಿಲ್ಲ. ಅರಣ್ಯ ಇಲಾಖೆಯು ನೆಡುತೋಪು ಬೆಳೆಸುವಾಗ ಖಾಲಿ ಜಾಗಗಳಲ್ಲಿ, ಕಂದಾಯ ಭೂಮಿ, ಸರ್ಕಾರಿ ಭೂಮಿಗಳಲ್ಲಿ ಸಸಿ ನೆಡಬಾರದು’ ಎಂದು ಅರಣ್ಯಧಿಕಾರಿಗಳಿಗೆ ಸೂಚಿಸಲಾಯಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ರವಿಂದ್ರ, ಉಪಾಧ್ಯಕ್ಷೆ ಪ್ರಮೀಳಾ, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಪ್ರಭಾಕರ್, ಸುಧಾ ಯೋಗೇಶ್, ಅಮಿತಾ ಮುತ್ತಪ್ಪ, ಕಾರ್ಯ ನಿರ್ವಹಣಾಧಿಕಾರಿ ಎಂ.ವೆಂಕಟೇಶ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT