ಡಿ.ಕೆ. ಶಿವಕುಮಾರ್ ಮಾಡುತ್ತಿರುವ ಆರೋಪ ಸಲ್ಲದು: ಸಿ.ಟಿ. ರವಿ

ಚಿಕ್ಕಮಗಳೂರು: ‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಇನ್ನು ಪ್ರಾಥಮಿಕ ತನಿಖೆ ಹಂತದಲ್ಲಿದೆ, ಅದಾಗಲೇ ಡಿ.ಕೆ. ಶಿವಕುಮಾರ್ ಆರೋಪ ಹೊರಿಸಲು ಮುಂದಾಗಿರುವುದು ಎಷ್ಟು ಸರಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮದೇ ಪಕ್ಷದ ಪರಿಶಿಷ್ಟ ಸಮುದಾಯದ ಶಾಸಕನ ಮನೆ ಮೇಲೆ ಬೆಂಕಿ ಹಾಕಿದವರನ್ನು ರಕ್ಷಣೆ ಮಾಡುತ್ತಿರುವುದು ಏಕೆ? ಬೆಂಕಿ ಹಾಕಲು ಯಾರು ಕಾರಣ ಎಂದು ಆ ಶಾಸಕ ದೂರು ನೀಡಿದ್ದರೂ, ಡಿಕೆಶಿ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ತಿವಿದರು.
‘ಪಕ್ಷದ ಸೂಚನೆ ಇಲ್ಲದೆ ಸ್ವಯಂಪ್ರೇರಿತವಾಗಿ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ತಲೆಹಾಕಬಾರದು ಎಂದು ನಿರ್ಣಯಿಸಿದ್ದೇನೆ. ಅರುಣ್ ಸಿಂಗ್ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪಕ್ಷದ ಇಲ್ಲಿನ ವಿದ್ಯಮಾನಗಳನ್ನು ಅವರು ನಿರ್ವಹಿಸುತ್ತಾರೆ ಸಂಪುಟ ವಿಸ್ತರಣೆ, ಪುನರ್ರಚನೆ ಬಗ್ಗೆ ನನಗೇನು ಗೊತ್ತಿಲ್ಲ. ಮುಖ್ಯಮಂತ್ರಿ, ವರಿಷ್ಠರು ನಿರ್ಧಾರಕ್ಕೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು.
‘ಉಗ್ರವಾದಿಗಳಿಗೆ ಬಿರಿಯಾನಿ ಕೊಡುವ ಕಾಲ ಹೋಯ್ತು. ಅವರಿಗೆ ಮಣೆ ಹಾಕಿ, ತಲೆದೂಗಿ ಅವರ ಪರ ನಿಲ್ಲುವ ರಾಜಕೀಯ ವ್ಯವಸ್ಥೆ ಈಗಿಲ್ಲ. ಅವರಿಗೆ ಅವರ ಭಾಷೆಯಲ್ಲೇ ಉತ್ತರ ಕೊಡುವುದು ಈಗಿನ ವ್ಯವಸ್ಥೆ. ಕಾಶ್ಮೀರದಲ್ಲೇ ಬಾಲ ಬಿಚ್ಚಿದವರ ಬಾಲ, ತಲೆ ‘ಕಟ್’ ಮಾಡಿದ್ದವೆ. ಇಲ್ಲಿಯೂ ಬಾಲ ಬಿಚ್ಚಲು ಬಿಡಲ್ಲ’ ಎಂದು ಉತ್ತರಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.