ಗುರುವಾರ , ಆಗಸ್ಟ್ 5, 2021
21 °C
ವೈದ್ಯಕೀಯ ಶಿಕ್ಷಣ ಕಾಲೇಜು– ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ

ಕಟ್ಟಡ ಕಾಮಗಾರಿ 3 ವರ್ಷದಲ್ಲಿ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸ ಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಕರಿಸಿದ್ದನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಬೇಕು ಎನ್ನುವುದು ಜನರ ಬಹುದಿನಗಳ ಒತ್ತಾಯವಾಗಿತ್ತು. ಅದರಂತೆ ₹600 ಕೋಟಿ ಅಂದಾಜು ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಮತ್ತು ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಾರ್ತಿಕ ಮಾಸದೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗು ವುದು. ಕರಿಸಿದ್ದನಹಳ್ಳಿಯಲ್ಲಿನ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ₹15 ಲಕ್ಷ, ಕೆಂಗೇನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿಗೆ ₹20 ಲಕ್ಷ ಅನುದಾನ ಬಿಡುಗಡೆ ಮಾಡ ಲಾಗಿದೆ. ನಗರದ ಕೊಳೆಗೇರಿಗಳಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ₹35 ಲಕ್ಷ ಮಂಜೂರು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಗರದಲ್ಲಿ ವಿವಿಧ ಯೋಜನೆಯಡಿ ₹ 300 ಕೋಟಿ ವೆಚ್ಚದಲ್ಲಿ ವಸತಿ ನಿರ್ಮಿಸಲಾಗುವುದು. ಈ ಪೈಕಿ ವಾಜಪೇಯಿ ವಸತಿ ಬಡಾವಣೆಯಲ್ಲಿ ₹103 ಅಂದಾಜು ವೆಚ್ಚದಲ್ಲಿ 1511 ವಸತಿ ನಿರ್ಮಿಸಲು ಟೆಂಡರ್ ಕರೆಯಲಾಗಿದೆ’ ಎಂದರು.

‘ದಂಟರಮಕ್ಕಿ ಬಳಿಯ ತೋಟ ಗಾರಿಕೆ ಇಲಾಖೆ ಜಾಗದಲ್ಲಿ ಜಿಲ್ಲಾಧಿ ಕಾರಿ ಕಚೇರಿ ಕಟ್ಟಡ ಸಂಕೀರ್ಣ ನಿರ್ಮಾಣ ಕುರಿತು ಈಚೆಗೆ ಸರ್ವಪಕ್ಷ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಸರ್ಕಾರದ ಗಮನಕ್ಕೆ ಕಳುಹಿಸಲಾ ಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ‘ಕರಿಸಿದ್ದನಹಳ್ಳಿಯ ನೀರಿನ ಭವಣೆ ನೀಗಿಸಲು ಎರಡು ಕೊಳವೆ ಬಾವಿ ಕೊರೆಸಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದು ತಡವಾಯಿತು’ ಎಂದರು.

ಎಪಿಎಂಸಿ ಸದಸ್ಯ ಬಸವರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರೇ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯ ಪ್ರಕಾಶ್, ಮುಖಂಡರಾದ ಈಶ್ವರಪ್ಪ, ಪ್ರಕಾಶ್, ಬೀರೇಗೌಡ, ಚಂದ್ರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.