ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ: ಚುನಾವಣೆ ನಾಳೆ

Last Updated 11 ಅಕ್ಟೋಬರ್ 2020, 4:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇದೇ 12ಕ್ಕೆ ಚುನಾವಣೆ ನಿಗದಿಯಾಗಿದೆ.

ನಗರದ ಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಪ್ರಕ್ರಿಯೆ ನಡೆಯಲಿದೆ. 12ರಂದು ಬೆಳಿಗ್ಗೆ 9ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. ನಂತರ ಪರಿಶೀಲನೆ ನಡೆಯಲಿದೆ. ವಾಪಸ್‌ ಪಡೆಯಲು 30 ನಿಮಿಷ ಅವಕಾಶ, ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ, ಮಧ್ಯಾಹ್ನ 1ಗಂಟೆಯಿಂದ ಮತದಾನ ನಂತರ ಫಲಿತಾಂಶ ಘೋಷಣೆ ನಡೆಯಲಿದೆ ಎಂದು ತರೀಕೆರೆ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ರೇಣುಕಾ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಸಿಸಿ ಬ್ಯಾಂಕ್‌ನ 13 ನಿರ್ದೇಶಕರ ಸ್ಥಾನಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಎರಡು ಮತ್ತು ಕೊಪ್ಪ ತಾಲ್ಲೂಕಿನ ಒಂದು ಸ್ಥಾನಕ್ಕೆ ಸಂಬಂಧಿಸಿದಂತೆ ಕೆಲವರು ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ಬಿಜೆಪಿ ಕೋರ್‌ ಕಮಿಟಿ ಸಭೆ ಇಂದು

ಬಿಜೆಪಿ ಕೋರ್‌ ಕಮಿಟಿ ಸಭೆ ಇದೇ 11ರಂದು ಸಂಜೆ ನಡೆಯಲಿದೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹೊಣೆ ಯಾರಿಗೆ ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ.

ಅಧ್ಯಕ್ಷ ಸ್ಥಾನ ಅಲಂಕರಿಸಲು ಹಲವರು ಅಕಾಂಕ್ಷಿಗಳು ಇದ್ದಾರೆ. ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌, ಕೆ.ಆರ್‌. ಆನಂದಪ್ಪ, ಟಿ.ಎಲ್‌. ರಮೇಶ್‌, ಕಡೂರು ಶಾಸಕ ಬೆಳ್ಳಿಪ್ರಕಾಶ್‌, ಮೂಡಿಗೆರೆಯ ಎಚ್‌.ಬಿ.ಶಿವಣ್ಣ (ಹಳಸೆ ಶಿವಣ್ಣ) ಮೊದಲಾದವರು ‘ಪಟ್ಟಿ’ಯಲ್ಲಿದ್ದಾರೆ. ಪಕ್ಷದ ಕೋರ್‌ ಕಮಿಟಿಯ ನಿರ್ಧಾರಕ್ಕೆ ಬದ್ಧ ಎಂಬುದು ಎಲ್ಲರ ಒಕ್ಕೊರಲ ಧ್ವನಿ.

==

ಚರ್ಚಿಸಿ ತೀರ್ಮಾನ: ಸಿ.ಟಿ.ರವಿ

ಚುಕ್ಕಾಣಿ ಹಿಡಿಯವವರಿಗೆ ಆಡಳಿತ ನಡೆಸುವ ಸಾಮರ್ಥ್ಯ, ಸವಾಲು ಎದುರಿಸುವ ಚಾಣಾಕ್ಷತೆ, ಎಲ್ಲವನ್ನೂ ನಿಭಾಯಿಸುವ ಜಾಣ್ಮೆ ಇವೆಲ್ಲವೂ ಇರಬೇಕು. ಕೋರ್‌ ಕಮಿಟಿಯಲ್ಲಿ ಎಲ್ಲವನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT