ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪ್ರತ್ರೆ: ಸೌಕರ್ಯ, ಸಿಬ್ಬಂದಿ ಕೊರತೆ ಪರಿಹರಿಸಲು ಮೊರೆ

Last Updated 16 ಜುಲೈ 2018, 14:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇವೆ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ, ಉಪಕರಣ ಇಲ್ಲ. ಸಮಸ್ಯೆ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜನದನಿ ಸಂಘಟನೆ ಸಂಚಾಲಕ ಬಿ.ಅಮ್ಜದ್‌ ಇಲ್ಲಿ ಸೋಮವಾರ ಒತ್ತಾಯಿಸಿದರು.

ಸವಲತ್ತುಗಳ ಕೊರತೆಯಿಂದ ಜಿಲ್ಲಾಸ್ಪತ್ರೆ ಸೊರಗಿದೆ. ಈ ಆಸ್ಪತ್ರೆಯನ್ನಿಟ್ಟುಕೊಂಡು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗುವುದು ಸರಿಯಲ್ಲ. ಜಿಲ್ಲಾಸ್ಪ್ರತ್ರೆಗೆ ಹಿಡಿದಿರುವ ‘ಗ್ರಹಣ’ ಬಿಡಿಸಬೇಕಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ತಕ್ಷಣವೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂಷಿಸಿದರು.

ಮೂಲಸೌಕರ್ಯಗಳ ಸಮಸ್ಯೆಯೂ ಇದೆ. ನೀರಿನ ಕೊರತೆ ಇದೆ. ಸೌಕರ್ಯ ಮತ್ತು ಸಿಬ್ಬಂದಿ ಕೊರತೆ ನೆಪವೊಡ್ಡಿ ಹೆರಿಗೆ, ಅಪಘಾತ ಮೊದಲಾದ ಪ್ರಕರಣಗಳನ್ನು ಹಾಸನ, ಶಿವಮೊಗ್ಗ, ಮಂಗಳೂರು ಆಸ್ಪತ್ರೆಗೆ ಕಳುಹಿಸುತ್ತಾರೆ. ಕುಂದುಕೊರತೆಗಳನ್ನು ನೀಗಿಸಿ ಆಸ್ಪತ್ರೆಗೆ ಕಾಯಕಲ್ಪ ಮಾಡಬೇಕು ಎಂದು ಆಗ್ರಹಿಸಿದರು.

ಕೀಲು–ಮೂಳೆ ತಜ್ಞರು, ಇಎನ್‌ಟಿ ತಜ್ಞರು, ಶಸ್ತ್ರಚಿಕಿತ್ಸಕರು ತಲಾ ಒಬ್ಬರು ಇದ್ದಾರೆ. ಇನ್ನು ತಲಾ ಇಬ್ಬರ ಅಗತ್ಯ ಇದೆ. ದಂತ ವೈದ್ಯರು ಇಬ್ಬರು ಇದ್ದು, ಇನ್ನೂ ಮೂವರನ್ನು ನೇಮಿಸಬೇಕು. ಮಕ್ಕಳು ವೈದ್ಯರು ಇಬ್ಬರು ಇದ್ದು, ಇನ್ನೂ ಇಬ್ಬರು ಬೇಕಿದೆ. ವಾರ್ಡ್‌ ಬಾಯ್ಸ್‌ 92 ಹುದ್ದೆಗಳ ಪೈಕಿ 28 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಎಕ್ಸ್‌ ರೇ ತಂತ್ರಜ್ಞ, ಇಸಿಜಿ ತಂತ್ರಜ್ಞರ ಹುದ್ದೆಗಳು ಖಾಲಿ ಇವೆ, ಫಾರ್ಮಸಿಸ್ಟ್‌ಗಳು ಮೂವರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಇಬ್ಬರು ನಿವೃತ್ತಿಯಂಚಿನಲ್ಲಿದ್ದಾರೆ. 6 ಫಾರ್ಮಾಸಿಸ್ಟ್‌ಗಳನ್ನು ನೇಮಕ ಮಾಡಬೇಕು. ವೆಂಟಿಲೇಟರ್‌ ನಿರ್ವಹಣೆ ಸಿಬ್ಬಂದಿ ಕೊರತೆ ಇದ್ದು, ವೆಂಟಿಲೇಟರ್‌ ಪರಿಣತರು ಮೂವರು ಹಾಗೂ 6 ಸ್ಟಾಫ್‌ ನರ್ಸ್‌ಗಳನ್ನು ನೇಮಿಸಬೇಕು. ಐವರು ಪ್ರಯೋಗಾಲಯ ತಜ್ಞರು, ಶಸ್ತ್ರಚಿಕಿತ್ಸಾಗಾರ ತಂತ್ರಜ್ಞರನ್ನು ನೇಮಕ ಮಾಡಬೇಕು. ಇಕೊ ಕಾರ್ಡಿಯೊಗ್ರಾಫ್‌ ಯಂತ್ರ, ಇಸಿಜಿ ಯಂತ್ರ, ಮೂರು ಅಂಬುಲೆನ್ಸ್‌, ಕುಡಿಯುವ ನೀರಿನ ಫಿಲ್ಟರ್‌, ಜನರೇಟರ್‌, 50 ಮಂಚ, 25 ಗಾಲಿ ಕುರ್ಚಿ, 20 ಟ್ರಾಲಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಜಿಲ್ಲಾಸ್ಪತ್ರೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸಲು ಗಡುವು ನೀಡಲಾಗುವುದು. ಕ್ರಮ ಕೈಗೊಳ್ಳದಿದ್ದರೆ ಚಳವಳಿ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಜನದನಿ ಸಂಘಟನೆ ಸಂಚಾಲಕ ಗುರುಶಾಂತಪ್ಪ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್‌.ಅನಿಲ್‌ಕುಮಾರ್‌, ನವಕರ್ನಾಟಕ ಯುವಶಕ್ತಿ ಜಿಲ್ಲಾಧ್ಯಕ್ಷ ಸಿ.ಆರ್‌.ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT