ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ; ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ

Last Updated 17 ಫೆಬ್ರುವರಿ 2021, 3:11 IST
ಅಕ್ಷರ ಗಾತ್ರ

ಮೂಡಿಗೆರೆ: ‘ರೈತರ 10 ಎಚ್.ಪಿ. ಪಂಪ್‌ಸೆಟ್‍ಗಳಿಗೆ ಸರ್ಕಾರದಿಂದ ಉಚಿತ ವಿದ್ಯುತ್‍ ಪೂರೈಕೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಭರವಸೆ ನೀಡಿದರು.

ತಾಲ್ಲೂಕಿನ ಹಳಸೆ ಕಾಫಿ ಕೋರ್ಟಿ ನಲ್ಲಿ ಮಂಗಳವಾರ ನೂತನ ಅತಿಥಿ ಗೃಹ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾಫಿ ಬೆಳೆಗೆ ವಿದ್ಯುತ್ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ರೈತರಿಗೆ 10 ಎಚ್.ಪಿ. ಪಂಪ್‌ಸೆಟ್‍ಗಳಿಗೆ ಸರ್ಕಾರದಿಂದ ಉಚಿತ ವಿದ್ಯುತ್‍ ಪೂರೈಕೆ ಹಾಗೂ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದು, ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

‘ಸಣ್ಣ ಕೈಗಾರಿಕೆಗಳಿಗೆ ಶೇ 5ರ ಬಡ್ಡಿ ದರದಲ್ಲಿ ಸಾಲ ನೀಡಿದಂತೆ ಕಾಫಿ ಬೆಳೆಗಾರರಿಗೂ ಶೇ 5ರ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಲಭ್ಯವಿರುವಂತೆ ಆಧುನಿಕ ತಂತ್ರಜ್ಞಾನದ ವ್ಯವಸ್ಥೆ ಕಲ್ಪಿಸಲಾಗುವುದು. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿ, ಗುಣಮಟ್ಟದ ಶಿಕ್ಷಣ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಕೌಶಲ ಅಭಿವೃದ್ಧಿ ಯೋಜನೆ ಮೂಲಕ ತಾಲ್ಲೂಕಿನ ಜನ್ನಾಪುರ ಗ್ರಾಮದ ಹೊಯ್ಸಳ ವಿದ್ಯಾಪೀಠದ 15 ಎಕರೆ ಜಾಗದಲ್ಲಿ ಸಿಲ್ಕ್ ಪಾರ್ಕ್ ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಮಾಡಲಾಗುವುದು. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು’ ಎಂದು ಹೇಳಿದರು.

ಇದಕ್ಕೂ ಮೊದಲು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಮಾತನಾಡಿ, ‘ಬೆಳೆಗಾರರು ತೋಟಕ್ಕೆ ನೀರು ಹಾಯಿಸುವ 10 ಎಚ್.ಪಿ. ಪಂಪ್ ಸೆಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು. ಕೌಶಲಾಭಿವೃದ್ದಿ ಯೋಜನೆಯಲ್ಲಿ ಜನ್ನಾಪುರದಲ್ಲಿ ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು. ಕಾಫಿ ಬೆಳೆಗಾರರು ಎದಿರುಸುತ್ತಿರುವ ಕಾಡಾನೆ, ಕಾಡುಪ್ರಾಣಿ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳುವ ಜತೆಗೆ, ಕಾಫಿ ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ‘ಪ್ರತಿ ವರ್ಷ ಡಿಸೆಂಬರ್‌ನಿಂದ 6 ತಿಂಗಳು ರೈತರು ತಮ್ಮ ಬೆಳೆ ಕಟಾವು ಮಾಡುವ ಕಾಲವಾಗಿದೆ. ಈ ವೇಳೆ ನಿರಂತರ 3 ಫೇಸ್ ವಿದ್ಯುತ್‍ ಒದಗಿಸಬೇಕು. 25 ಲಕ್ಷ ಕಾರ್ಮಿಕರ ಬದುಕು ಕಾಫಿ ತೋಟದಲ್ಲಿದೆ. ಅವರಿಗೆ ಜೀವನ ನಡೆಸಲು ಅನುಕೂಲ ವಾಗಬೇಕಾದರೆ ಬೆಳೆಗಾರರು ಸಂಕಷ್ಟದಿಂದ ಪಾರಾಗಬೇಕಾಗಿದೆ’ ಎಂದರು.

ಕಾಫಿ ಕೋರ್ಟ್‍ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್‍, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ವಿಧಾನ ಪರಿಷತ್ ಸದಸ್ಯ ಮಾಜಿ ಎಸ್.ವಿ. ಮಂಜುನಾಥ್, ತಾಲ್ಲೂಕು ಬೆಳಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕಾಫಿ ಬೆಳೆಗಾರರಾದ ಹಳಸೆ ಶಿವಣ್ಣ, ದಿನೇಶ್‍ ದೇವವೃಂದ, ದೀಪಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT