ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರು: ಜನರಿಗೆ ತಪ್ಪದ ಗೋಳು

Published 5 ಜುಲೈ 2024, 14:32 IST
Last Updated 5 ಜುಲೈ 2024, 14:32 IST
ಅಕ್ಷರ ಗಾತ್ರ

ಮೂಡಿಗೆರೆ: ಚಿಕ್ಕಮಗಳೂರಿನಿಂದ – ಹ್ಯಾಂಡ್ ಪೋಸ್ಟ್‌ವರೆಗೆ  ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬೇಸಿಗೆಯಲ್ಲಿ ರಸ್ತೆ ಬದಿಗೆ ಸುರಿದ ಮಣ್ಣು, ಈಗ ಮಳೆಗಾಲದಲ್ಲಿ ಅಕ್ಷರಶಃ ಕೆಸರುಗದ್ದೆಯಾಗಿ ಬದಲಾಗಿದೆ.

ಮಣ್ಣು ಹಾಕಿದ್ದರಿಂದ ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸಿದ್ದರು. ಈಗ ಮಳೆಗಾಲದಲ್ಲಿ ಕೆಸರಿನ ಸಂಕಷ್ಟ ಮುಂದುವರಿದಿದೆ.  ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳು ಸಾಗುವುದು ದುಸ್ಥರವಾಗಿದೆ. ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೆಸರಿನಿಂದಾಗಿ ರಸ್ತೆ ಪಕ್ಕದಲ್ಲಿ ಹೆಜ್ಜೆ ಇಡಲಾಗದೆ, ರಸ್ತೆ ಮಧ್ಯದಲ್ಲೇ ನಡೆದುಕೊಂಡು ಹೋಗಬೇಕಿದೆ. ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ.

ಹೆದ್ದಾರಿ ಬದಿಯ ಖಾಲಿ ಜಾಗದಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಈಗ ಆಳವಾದ ಕೆಸರು ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ನಿಲ್ಲಿಸಲಾಗದೆ  ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಂಗಡಿಗಳ ಮುಂಭಾಗದಲ್ಲಿ ಕೆಸರು ತುಂಬಿಕೊಂಡಿರುವುದರಿಂದ ವರ್ತಕರಿಗೂ ವ್ಯಾಪಾರಕ್ಕೆ ತೊಂದರೆ ಆಗಿದೆ.

‘ಮುಂಗಾರು ಪೂರ್ವದಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ಬದಿಯಲ್ಲಿದ್ದ ಗುಂಡಿಗಳನ್ನು ಮುಚ್ಚಲು ಜೇಡಿ ಮಣ್ಣನ್ನು ತಂದು ಸುರಿಯಲಾಗಿತ್ತು. ಇದರಿಂದ ದೂಳು ಆವರಿಸಿಕೊಂಡು ಜನರು ತೊಂದರೆ ಅನುಭವಿಸಿದ್ದರು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಕೆಲವೆಡೆ ಮಣ್ಣು ತೆರವುಗೊಳಿಸಲಾಗಿತ್ತು.

ಈಗ ಮಳೆಯಿಂದಾಗಿ ಪಟ್ಟಣದ ಕೆ.ಎಂ.ರಸ್ತೆಯ ಬಹುತೇಕ ಕಡೆ ಕೆಸರುಮಯವಾಗಿದೆ. ಕೆಸರನ್ನು ತೆರವುಗೊಳಿಸಿ, ವಾಹನ ಸವಾರರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ವರ್ತಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ವರ್ತಕರಾದ ಸಯ್ಯದ್ ಅಲಿ ಆಗ್ರಹಿಸಿದರು.

ಮೂಡಿಗೆರೆ ಪಟ್ಟಣದ ಕೆ.ಎಂ. ರಸ್ತೆ ಬದಿಯಲ್ಲಿ  ಮಳೆಯಿಂದಾಗಿ ಕೆಸರು ಉಂಟಾಗಿರುವುದು
ಮೂಡಿಗೆರೆ ಪಟ್ಟಣದ ಕೆ.ಎಂ. ರಸ್ತೆ ಬದಿಯಲ್ಲಿ  ಮಳೆಯಿಂದಾಗಿ ಕೆಸರು ಉಂಟಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT