ಮಂಗಳವಾರ, ನವೆಂಬರ್ 29, 2022
29 °C

ಕಾನು, ಗೋಮಾಳವನ್ನು ಅರಣ್ಯಕ್ಕೆ ಸೇರ್ಪಡೆ; ಕೆಲವರಿಂದ ಕೊಲೆ ಬೆದರಿಕೆ: ರಾಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಭಾಗದ ಜನರು ಆತಂಕದಲ್ಲಿದ್ದಾರೆ. ಜಾಗ ಅರಣ್ಯಕ್ಕೆ ಸೇರಿದರೆ ಕೊಲೆ ಮಾಡುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಬೆಳಿಗ್ಗೆ 6 ಗಂಟೆಗೆ ಬೆದರಿಕೆ ಹಾಕಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ಕ್ಷೇತ್ರದಲ್ಲಿ ಓಡಾಡಬೇಕಾದ ಸ್ಥಿತಿ ಇದೆ. ಬೆದರಿಕೆ ಹಾಕಿದವರ ಹೆಸರು ಹೇಳಲ್ಲ, ಅವರ ವಿರುದ್ಧ ದೂರನ್ನೂ ದಾಖಲಿಸಲ್ಲ’ ಎಂದರು. 

‘ಬದುಕಿಗೆ ಕಂಟಕ ಎದುರಾಗಿರುವುದರಿಂದ ಅನಿವಾರ್ಯವಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿರುವುದರಲ್ಲಿ ತಪ್ಪಿಲ್ಲ. ಸರ್ಕಾರ ಸ್ಪಂದಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ, ನಮಗೆ ಬೆದರಿಕೆಯೂ ಇರಲ್ಲ’ ಎಂದರು. 
‘ಶೃಂಗೇರಿ ತಾಲ್ಲೂಕಿನ ಹಾದಿಕೆರೂರು ಸರ್ವೆ ನಂಬರ್‌ 11ರಲ್ಲಿ 1090 ಎಕರೆ ಪ್ರದೇಶದಲ್ಲಿ 762 ಎಕರೆ ಅರಣ್ಯ, 328 ಎಕರೆ ಗೋಮಾಳ ಇದೆ. ಹಾದಿ ಗ್ರಾಮದ ಸರ್ವೆ ನಂಬರ್‌ 2ರಲ್ಲಿ 971 ಎಕರೆ ಪ್ರದೇಶದಲ್ಲಿ 734 ಎಕರೆ ಕಾಡು, 234 ಎಕರೆ ಕಾನು ಇದೆ. ತಹಶೀಲ್ದಾರ್‌ ಅವರು ಮೋಜಣಿ  ಮತ್ತು ಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಈವರೆಗೆ ಮೋಜಣಿ ಮಾಡಿಲ್ಲ. ಗೋಮಾಳ, ಕಾನು ಜಾಗವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಅಲ್ಲಿನ ಜನರು ಆತಂಕದಲ್ಲಿದ್ದಾರೆ’ ಎಂದು ಹೇಳಿದರು. 

****

ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಶಾಸಕ ರಾಜೇಗೌಡ ದೂರು ನೀಡಿದರೆ ಉನ್ನತ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. 
-ಬಿ.ಎ.ಬಸವರಾಜ (ಬೈರತಿ), ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಮಗಳೂರು

****

ಶಾಸಕ ರಾಜೇಗೌಡ ಅವರೊಂದಿಗೆ ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಚರ್ಚಿಸುತ್ತೇನೆ. ಅವರಿಂದ ದೂರು ಪಡೆದು ತನಿಖೆ ನಡೆಸುತ್ತೇವೆ. 
-ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು