ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಬಲಿಕೊಟ್ಟು ಚುನಾವಣೆ ಸೂಕ್ತವಲ್ಲ

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ
Last Updated 14 ಡಿಸೆಂಬರ್ 2020, 6:34 IST
ಅಕ್ಷರ ಗಾತ್ರ

ಮೂಡಿಗೆರೆ: ರೈತರ ಹಿತವನ್ನು ಬಲಿಕೊಟ್ಟು ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಫಿ ಬೆಳೆಗಾರರು ಹಾಗೂ ಸರ್ವ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ನಿರ್ಧರಿಸಿರುವುದು ಸೂಕ್ತವಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸರ್ವ ಪಕ್ಷಗಳ ಬೆಂಬಲಿತರು ಹಾಗೂ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದವರು ನಾಮಪತ್ರ ವಾಪಸ್‌ ಪಡೆದು ಚುನಾವಣೆ ಬಹಿಷ್ಕಾರ ನಡೆಸಲು ನನ್ನ ಬೆಂಬಲವಿದೆ’ ಎಂದರು.

‘ಕಸ್ತೂರಿರಂಗನ್ ವರದಿ ಜಾರಿಯಾದರೆ ಅರಣ್ಯ ಪ್ರದೇಶದೊಂದಿಗೆ ಸಾಂಸ್ಕೃತಿಕ ಅರಣ್ಯವಾದ ಕಾಫಿ, ಇತರೆ ತೋಟಗಳು ಅರಣ್ಯ ಪ್ರದೇಶದಲ್ಲಿ ವಿಲೀನಗೊಂಡು ರೈತರು, ಕೂಲಿ ಕಾರ್ಮಿಕರು ಬೀದಿ ಪಾಲಾಗುತ್ತಾರೆ. ಅರಣ್ಯ ಪ್ರದೇಶವನ್ನು ಮಾತ್ರ ಗುರಿಯಾಗಿಸುವುದನ್ನು ಬಿಟ್ಟು ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಜಮೀನಿನ ತಂಟೆಗೆ ಕಸ್ತೂರಿರಂಗನ್ ವರದಿ ಮುಂದುವರಿಯಬಾರದು’ ಎಂದು ಹೇಳಿದರು.

‘ಜನರೊಂದಿಗೆ ನಾನು ಬೀದಿಯಲ್ಲಿ ಕುಳಿತು ಅವರ ಹೋರಾಟಕ್ಕೆ ನ್ಯಾಯ ಒದಗಿಸಿಕೊಡಲು ಬದ್ಧವಾಗಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾಫಿ ಬೆಳೆಗಾರರ ನೇತೃತ್ವದಲ್ಲಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ಬಹಿಷ್ಕಾರದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಆದರೂ ನಾಮಪತ್ರ ಸಲ್ಲಿಕೆಯಾಗಿವೆ. ಈ ಬಗ್ಗೆ ಬೆಳೆಗಾರರ ನೇತೃತ್ವದಲ್ಲಿ ಅಲ್ಲಲ್ಲಿ ವಿವಿಧ ಪಕ್ಷಗಳ ಸಭೆ ನಡೆಯುತ್ತಿವೆ. ಸೋಮವಾರದ ವೇಳೆಗೆ ಚುನಾವಣೆ ಬಹಿಷ್ಕಾರಕ್ಕೆ ಮತ್ತಷ್ಟು ಬಲ ಬರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT