ಭಾನುವಾರ, ಸೆಪ್ಟೆಂಬರ್ 19, 2021
24 °C
ಕಾಡಾನೆಗಳ ಸ್ಥಳಾಂತರಕ್ಕೆ ಸ್ಥಳೀಯರ ಒತ್ತಾಯ

ಮೂಲರಹಳ್ಳಿ: ಕಾಡಾನೆ ದಾಳಿ- ಅಪಾರ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಮೂಲರಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಮೂರು ಕಾಡಾನೆಗಳು ಮಂಗಳವಾರ ನಸುಕಿನಲ್ಲಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ.

ನಾಲ್ಕೈದು ದಿನಗಳಿಂದ ಮೂಲರ ಹಳ್ಳಿ, ಗುತ್ತಿ, ಹೆಸಗೋಡು, ಕೊಟ್ರಕೆರೆ, ತ್ರಿಪುರ, ಕೋಗಿಲೆ, ಭಿನ್ನಾಡಿ ಭಾಗ ಗಳಲ್ಲಿ ತಿರುಗಾಡುತ್ತಿರುವ ಮೂರು ಕಾಡಾನೆ ಗಳು, ಮಂಗಳವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಮೂಲರಹಳ್ಳಿ ಗ್ರಾಮಕ್ಕೆ ಬಂದಿವೆ. ಗ್ರಾಮದ ನವೀನ್, ರವೀಶ್, ಸುಬ್ರಾಯಗೌಡ, ಲಕ್ಷ್ಮಣಗೌಡ, ರಘುರಾಂ, ಭೈರಪ್ಪಗೌಡ, ಕಿರಣ್, ಕೃಷ್ಣೇಗೌಡ ಸೇರಿದಂತೆ ಹಲವು ರೈತರ ಕಾಫಿ ತೋಟಗಳಲ್ಲಿ ತಿರುಗಾಡಿ ಅಪಾರ ಪ್ರಮಾಣದ ಕಾಫಿ ಗಿಡಗಳನ್ನು ಹಾನಿಗೊಳಿಸಿವೆ.

ಆಹಾರಕ್ಕಾಗಿ ಬೈನೆ ಮರಗಳನ್ನು ಧರೆಗುರುಳಿಸಿರುವುದರಿಂದ, ಬೈನೆ ಮರಗಳು ಕಾಫಿ ಗಿಡಗಳ ಮೇಲೆ ಬಿದ್ದು, ಹತ್ತಾರು ವರ್ಷಗಳ ಕಾಫಿ ಗಿಡಗಳು ಧ್ವಂಸವಾಗಿವೆ. ಬಾಳೆ, ಕಾಳು ಮೆಣಸಿನ ಗಿಡಗಳಿಗೂ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ತಾಲ್ಲೂಕಿನ ಚಂದ್ರಾಪುರ, ಕಸ್ಕೇಬೈಲ್ ಭಾಗಗಳಲ್ಲಿ ಹಾಗೂ ತ್ರಿಪುರ, ಮೂಲರಹಳ್ಳಿ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ಅರಣ್ಯ ಇಲಾಖೆಯು ಎರಡು ತಂಡಗಳಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕೆಲಸ ಮಾಡುತ್ತಿದ್ದು, ಹಗಲಿನಲ್ಲಿ ಅರಣ್ಯದೊಳಗಿರುವ ಕಾಡಾನೆಗಳು, ತಡ ರಾತ್ರಿಯ ಬಳಿಕ ಕಾಫಿ ತೋಟಗಳಿಗೆ ನುಗ್ಗುತ್ತಿದ್ದು, ಸ್ಥಳೀಯರಿಗೆ ತಲೆ ನೋವಾಗಿ ಪರಿಣಮಿಸಿದೆ.

‘ಮೂಲರಹಳ್ಳಿ, ಗುತ್ತಿ, ದೇವರ ಮನೆ ಭಾಗವು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಈ ಭಾಗ ದಲ್ಲಿ ಕೃಷಿ ಮಾಡುವುದೇ ಸವಾಲಾಗಿದೆ. ಮಳೆಯಿಂದ ಶೇ 40 ರಷ್ಟು ಬೆಳೆ ಕೈ ಸೇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಗಳು ಕೂಡ ನಿತ್ಯ ದಾಳಿ ನಡೆಸಿ ಬೆಳೆ ಹಾನಿಗೊಳಿಸಿದರೆ ಸ್ಥಳೀಯರು ಬದುಕುವುದಾದರೂ ಹೇಗೆ? ಕೂಡಲೇ ಕಾಡಾನೆಗಳನ್ನು ಅರಣ್ಯ ಇಲಾಖೆಯು ಸ್ಥಳಾಂತರಿಸಬೇಕು’ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು