ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಖಲಾತಿ ಶೂನ್ಯ: ಇತಿಹಾಸದ ಪುಟ ಸೇರಲಿರುವ ಸರ್ಕಾರಿ ಶಾಲೆ

ಸೀಗೋಡು: ಸಿಆರ್‌ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Published 28 ಜೂನ್ 2024, 5:30 IST
Last Updated 28 ಜೂನ್ 2024, 5:30 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಗ್ರಾಮದ ಸೀಗೋಡು ಬಳಿಯ ಕಾಫಿ ಸಂಶೋಧನಾ ಕೇಂದ್ರದ (ಸಿಆರ್‌ಎಸ್) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಯಾವುದೇ ವಿದ್ಯಾರ್ಥಿಗಳು ದಾಖಲಾಗದ ಕಾರಣ ಮುಚ್ಚುವ ಹಂತ ತಲುಪಿದ್ದು, ಇತಿಹಾಸದ ಪುಟ ಸೇರಲಿದೆ.

1966ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 7 ಕೊಠಡಿಗಳು, ಒಂದು ಸುಸಜ್ಜಿತ ರಂಗಮಂದಿರ ಇದೆ. ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ, ವಿವಿಧಡೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್, ಐದು ಕಂಪ್ಯೂಟರ್, ಯುಪಿಎಸ್ ಅಳವಡಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಸುತ್ತಲಿನ ವಿದ್ಯಾರ್ಥಿಗಳು ಇಲ್ಲಿನ ಶಾಲೆಗೆ ದಾಖಲಾಗುತ್ತಿಲ್ಲ.

ಶಾಲೆ ಉಳಿಸುವ ಸಲುವಾಗಿ ಸುತ್ತಲಿನ ಗಂಟೆನಾಯ್ಕ, ನೇತ್ರಕೊಂಡ, ಗುಂಡಿಖಾನ್ ಮುಂತಾದ ಕಡೆಗೆ ಶಿಕ್ಷಕರು ತೆರಳಿ ದಾಖಲಾತಿ ಅಭಿಯಾನ, ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ 6ನೇ ತರಗತಿಗೆ ಒಬ್ಬ ವಿದ್ಯಾರ್ಥಿನಿ ದಾಖಲಾಗಿದ್ದರು. ಆದರೆ, ಇದೀಗ ಆ ವಿದ್ಯಾರ್ಥಿನಿಯ ಪೋಷಕರೂ ಕೂಡ ಆಕೆಯನ್ನು ಬೇರೆ ಶಾಲೆಗೆ ಸೇರ್ಪಡೆಗೊಳಿಸಲು ಮುಂದಾಗಿದ್ದು ವರ್ಗಾವಣೆ ಪತ್ರಕ್ಕೆ ಕೋರಿಕೆ ಸಲ್ಲಿಸಿದ್ದಾರೆ.

‘ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ  ಹಿರೇಗದ್ದೆ ಗ್ರಾಮದ ತಲವಾನೆ, ಅರಳಿಕೊಪ್ಪದಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಎಲ್ಲಾ ಸೌಲಭ್ಯಗಳನ್ನು ನೀಡಿದರೂ ಮಕ್ಕಳು ದಾಖಲಾಗುತ್ತಿಲ್ಲ’ ಎನ್ನುತ್ತಾರೆ ಕೊಗಳಿಯ ಪೋಷಕ ಪ್ರಭಾಕರ್.

ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಶಿಕ್ಷಕರು ಹಾಗೂ ಒಬ್ಬರು ಬಿಸಿಯೂಟ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಇರುವ ಒಬ್ಬ ವಿದ್ಯಾರ್ಥಿನಿಗಾಗಿ ಈ ಮೂವರೂ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಆ ವಿದ್ಯಾರ್ಥಿನಿಯೂ ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದರಿಂದ ಮುಂದೇನು ಎಂಬ ಪ್ರಶ್ನೆ ಮೂಡಿದೆ.

‘ಪಕ್ಕದ ಅಂಗನವಾಡಿಯಲ್ಲೂ ಕೇವಲ ನಾಲ್ಕು ಮಕ್ಕಳಿದ್ದಾರೆ.  ಇಲ್ಲಿರುವ ಖಾಸಗಿ ಶಾಲೆಗೆ ಎಲ್ಲರೂ ಮಕ್ಕಳನ್ನು ಸೇರಿಸುತ್ತಿರುವ ಕಾರಣ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಇಲ್ಲದಂತಾಗಿದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಶೇಖರಪ್ಪ.

‘ಚರ್ಚಿಸಿ ನಿರ್ಧಾರ‘

‘ಜುಲೈ 15ರವರೆಗೆ ವಿದ್ಯಾರ್ಥಿಗಳನ್ನು ಶಾಲೆಗೆ ಹೊಸದಾಗಿ ದಾಖಲು ಮಾಡಿಕೊಳ್ಳಲು ಅವಕಾಶವಿದೆ. ಈ  ಶಾಲೆಯ ಒಬ್ಬರು ಶಿಕ್ಷಕರನ್ನು ಬೇರೆಡೆಗೆ ನಿಯೋಜಿಸಲು ಚಿಂತಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗದಿದ್ದಲ್ಲಿ ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ .ಜ್ಯೋತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT