ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಹೂವು, ಹಣ್ಣು ತುಟ್ಟಿ: ಗ್ರಾಹಕರು ಕಂಗಾಲು

Published 8 ಮಾರ್ಚ್ 2024, 7:26 IST
Last Updated 8 ಮಾರ್ಚ್ 2024, 7:26 IST
ಅಕ್ಷರ ಗಾತ್ರ

ಕಡೂರು: ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದ್ದು, ಗ್ರಾಹಕರು ಬೆಲೆ ಕೇಳಿಯೇ ಬೆವರುವಂತಾಗಿದೆ. ಸೇವಂತಿಗೆ ಹೂವು ಒಂದು ಮಾರಿಗೆ ₹80, ಹತ್ತು ಮಾರುಗಳ ಒಂದು ಕುಚ್ಚು ₹650 ರಿಂದ ₹700ರವರೆಗೆ ದರ ಇದೆ.

ಕನಕಾಂಬರ ಮತ್ತು ಕಾಕಡಾ ಹೂವು ಒಂದು ಮಾರಿಗೆ ₹40 ರಿಂದ ₹60 ಬೆಲೆ ಇದೆ.  ಈ ಹೂವುಗಳನ್ನು ಬೆಳೆಯುವವರ ಸಂಖ್ಯೆ ತಾಲ್ಲೂಕಿನಲ್ಲಿ  ಕಡಿಮೆಯಿದೆ. ಬಣ್ಣದ  ಸೇವಂತಿಗೆ ಒಂದು ಮಾರಿಗೆ ₹60 ಇದ್ದರೆ ಚೆಂಡು ಹೂವು ಒಂದು ಕೆ.ಜಿ.ಗೆ ₹60 ಬೆಲೆ ಇದೆ. ಹಾರಕ್ಕೆ ಬಳಸುವ ಗುಲಾಬಿ ಒಂದು ಕೆಜಿಗೆ ₹ 600 ಇದೆ. ಒಂದು ಗುಲಾಬಿ ಬೆಲೆ ₹10 ಇದೆ.  ತುಳಸಿ ಮಾಲೆ ಒಂದು ಮಾರಿಗೆ ₹ 60 ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಕಡೂರು ಪ್ರದೇಶದಲ್ಲಿ ಹೂವು ಬೆಳೆಯುವುದು ಕಡಿಮೆ. ಕೆಲವರು ಕನಕಾಂಬರ ಮತ್ತು ಸ್ವಲ್ಪ ಪ್ರದೇಶದಲ್ಲಿ ಸೇವಂತಿಗೆ ಬೆಳೆಯುತ್ತಾರೆ. ಆದರೆ, ಈ ಬಾರಿ ಬರಗಾಲ ಇರುವುದರಿಂದ  ಹೂವಿನ ಬೆಳೆ ಇಲ್ಲವೇ ಇಲ್ಲ ಎನ್ನುವ ಸ್ಥಿತಿ ಇದೆ.  ಹೂವು ಮಾರಾಟಗಾರರು ದೂರದ ಬೆಂಗಳೂರು, ತುಮಕೂರು, ಚಿತ್ರದುರ್ಗ ಮುಂತಾದೆಡೆಯಿಂದ ಹೂವು ತರಿಸುತ್ತಾರೆ. ಕೆಲ ವ್ಯಾಪಾರಿಗಳು ಕಟ್ಟಿರುವ ಹೂವು ತರಿಸಿದರೆ ಮತ್ತೆ ಕೆಲವರು ಕೆ.ಜಿ. ಲೆಕ್ಕದಲ್ಲಿ ಹೂವು ತರಿಸಿ ಮನೆಯಲ್ಲೇ ಕಟ್ಟಿ ಮಾರಾಟ ಮಾಡುತ್ತಾರೆ.

ಹಣ್ಣಿನ ಬೆಲೆಯೂ ಏರುಗತಿಯಲ್ಲಿದೆ. ಸೇಬು ಕೆ,ಜಿಗೆ ₹180, ದಾಳಿಂಬೆ ₹ 160, ಪಚ್ಚಬಾಳೆ ಹಣ್ಣು ₹ 35, ಏಲಕ್ಕಿ ಬಾಳೆಹಣ್ಣು ₹ 70, ಸೀಬೆ ₹ 140 ರೂಪಾಯಿ ಬೆಲೆಯಿದೆ. ಸೀಡ್ ಲೆಸ್ ದ್ರಾಕ್ಷಿ ಮಾತ್ರ ₹ 100 ರೂಪಾಯಿಗೆ ಒಂದೂವರೆ ಕೆಜಿ ದೊರೆಯುತ್ತದೆ. ಬೇಸಿಗೆ, ಹಬ್ಬಗಳ ಸಾಲು ಆರಂಭವಾಗುವುದಕ್ಕೂ ಮುನ್ನವೇ ಹೂವು- ಹಣ್ಣುಗಳ ಬೆಲೆ ಹೆಚ್ಚಾಗಿರುವುದು ಗ್ರಾಹಕರಿಗೆ ಬಿಸಿ ತುಪ್ಪವಾಗಿದೆ.

ಬೆಲೆ ಹೆಚ್ಚುವ ಸಾಧ್ಯತೆ

ಹೂವು ತರಿಸಿ ಅದನ್ನು ಕಟ್ಟಿ ಮಾರಾಟ ಮಾಡಿದರೂ ಹೆಚ್ಚಿನ ಲಾಭ ಸಿಗುವುದಿಲ್ಲ. ಎಲ್ಲ ಕಡೆಯೂ ಹೂವಿನ ಬೆಲೆ ಹೆಚ್ಚಿದೆ. ಕೆಲ ದಿನ ಕಳೆದರೆ ಹೂವಿನ ಬೆಲೆ ಇನ್ನೂ ಹೆಚ್ಚಾಗುತ್ತದೆ ಎನ್ನುತ್ತಾರೆ ಕಡೂರು ಮರವಂಜಿ ಸರ್ಕಲ್‌ನಲ್ಲಿರುವ ಹೂವಿನ ವ್ಯಾಪಾರಿ ಗೋವಿಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT