ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಮೂರ್ತಿ ವಿಸರ್ಜನೆ

ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ 64ನೇ ವರ್ಷದ ವಿದ್ಯಾಗಣಪತಿ ಉತ್ಸವ
Last Updated 17 ಸೆಪ್ಟೆಂಬರ್ 2022, 5:41 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ 64ನೇ ವರ್ಷದ ವಿದ್ಯಾಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಸಾವಿರಾರು ಭಕ್ತರ ಜಯಘೋಷದ ನಡುವೆ ಸಂಪನ್ನಗೊಂಡಿತು.

ಆ.31 ರಂದು ಪ್ರತಿಷ್ಠಾಪಿಸಿದ್ದಗಣಪತಿ ಮೂರ್ತಿಗೆ ನಿತ್ಯ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತಿತ್ತು. ಪ್ರತಿದಿನ ರಾಜ್ಯದ ವಿವಿಧ ಭಾಗಗಳ ಕಲಾವಿದರಿಂದ ರಸಮಂಜರಿ, ನೃತ್ಯವೈಭವ, ನಾಟಕ, ಯಕ್ಷಗಾನ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಜಿ, ವಿನಯ ಗುರೂಜಿ ಅವರಿಂದ ಆಶೀರ್ವಚನ ನಡೆಯಿತು.

ಶುಕ್ರವಾರ ಗಣಪತಿ ವಿಸರ್ಜನೆಯ ಅಂಗವಾಗಿ ಬೆಳಿಗ್ಗೆ ದಾವಣಗೆರೆಯ ಭಾರತಿ ಆರ್ಕೆಸ್ಟ್ರಾದಿಂದ ರಸಮಂಜರಿ, ಲಾಟರಿ ಡ್ರಾ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸುಮಾರು 15 ಸಾವಿರ ಮಂದಿ ಊಟ ಸವಿದರು. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಊಟದ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಗಣಪತಿ ಸೇವಾ ಸಮಿತಿ ಸದಸ್ಯರು ಭಕ್ತರಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಕಲ್ಪಿಸಿದ್ದರು.

ಮಧ್ಯಾಹ್ನ ವಿಸರ್ಜನಾ ಪೂಜೆಯ ನಂತರ ಕಲಾರಂಗ ಕ್ರೀಡಾಂಗಣದಿಂದ ಹೊರಟ ಮೆರವಣಿಗೆ ರಂಭಾಪುರಿ ಪೆಟ್ರೋಲ್ ಬಂಕ್‌ವರೆಗೆ ಸಾಗಿ ಅಲ್ಲಿಂದ ಮತ್ತೆ ಬಸ್ ನಿಲ್ದಾಣದ ಮೂಲಕ ಜೇಸಿ ವೃತ್ತ ತಲುಪಿತು. ಅಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.

ಮೆರವಣಿಗೆಯಲ್ಲಿ ಸಾಗಿದ ರಾಣೆಬೆನ್ನೂರಿನ ಬಸವರಾಜ್ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ ಹಾಡಿಗೆ ಯುವಕರು, ಯುವತಿಯರು, ಮಕ್ಕಳು ಹುಚ್ಚೆದ್ದು ಕುಣಿದರು. ಪೊಲೀಸರೂ ಜನರೊಂದಿಗೆ ಸೇರಿಕೊಂಡು ಹೆಜ್ಜೆಹಾಕಿದರು. ಗಣಪತಿ ಹೊತ್ತ ಟ್ರ್ಯಾಕ್ಟರ್ ಏರಿದ ಶಾಸಕ ಟಿ.ಡಿ.ರಾಜೇಗೌಡ ಚಾಲಕರಾಗಿ ಮೆರವಣಿಗೆಯಲ್ಲಿ ಹೋಗಿ ಎಲ್ಲರ ಗಮನ ಸೆಳೆದರು.

ಮೆರವಣಿಗೆಯ ಮುಂಚೂಣಿಯಲ್ಲಿ ಗುರುವಾಯನಕೆರೆಯ ಕೀಲುಕುದುರೆ, ಗೊಂಬೆ, ಕರಗ ನೃತ್ಯ, ರಾಮಕೃಷ್ಣ ತಂಡದ ಹಲಗೆ ವಾದ್ಯ, ಮಾರ್ಪಳ್ಳಿಯ ಮಹಾಲಿಂಗೇಶ್ವರ ಚಂಡೆ ಬಳಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ರಾಜಬೀದಿಯಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿನ ಕಟ್ಟಡಗಳ ಮೇಲೆ ನಿಂತ ಸಾವಿರಾರು ಜನ ಕುತೂಹಲದಿಂದ ವೀಕ್ಷಿಸಿದರು.

ಮೆರವಣಿಗೆ ಹೊರಡುತ್ತಿದ್ದಂತೆಮಳೆಯ ಸಿಂಚನವಾಯಿತು. ಮಳೆ ಬಿಟ್ಟ ನಂತರ ಮತ್ತೆ ಒಗ್ಗೂಡಿದ ಭಕ್ತರು ರಸಮಂಜರಿಯ ಹಾಡಿಗೆ ಹೆಜ್ಜೆ ಹಾಕಿದರು. ಬಸ್ ನಿಲ್ದಾಣ ಸಮೀಪದ ಶ್ರೀನಿವಾಸ ಹೋಟೆಲ್‌ ಜೇಸಿವೃತ್ತದ ವರೆಗೂ ಸಹಸ್ರಾರು ಮಂದಿ ಸೇರಿಕೊಂಡರು. ಗಣಪತಿ ಸೇವಾ ಸಮಿತಿ ಸದಸ್ಯರು ಬಿಳಿ ಬಣ್ಣದ ಅಂಗಿ ಧರಿಸಿ ಮೆರವಣಿಗೆಯ ಮುಂಚೂಣಿಯಲ್ಲಿ ನಿಂತು ಎಲ್ಲರ ಗಮನ ಸೆಳೆದರು.

ರೋಟರಿ ವೃತ್ತದವರೆಗೆ ಸಾಗಿದ ಮೆರೆವಣಿಗೆ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬಳಿ ಭದ್ರಾನದಿ ದಂಡೆಗೆ ಕೊಂಡೊಯ್ದು ಅಲ್ಲಿ ಗಣಪತಿಯನ್ನು ಭದ್ರಾ ನದಿಯಲ್ಲಿ ಜಲಸ್ತಂಬನಗೊಳಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ 400ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಖುದ್ದಾಗಿ ಎಎಸ್ಪಿ ಕೃಷ್ಣಮೂರ್ತಿ ಸ್ಥಳದಲ್ಲಿ ಹಾಜರಿದ್ದು, ಪೊಲೀಸರಿಗೆ ಮಾರ್ಗದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT