ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಿಯಿಂದ 180 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಸ್ತು: ಯಡಿಯೂರಪ್ಪ

ಗುರುಸಿದ್ಧರಾಮ ಶಿವಯೋಗಿಯವರ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭ
Last Updated 15 ಜನವರಿ 2020, 10:20 IST
ಅಕ್ಷರ ಗಾತ್ರ

ಸೊಲ್ಲಾಪುರ (ಚಿಕ್ಕಮಗಳೂರು): ಗೊಂದಿಯಿಂದ 180 ಕೆರೆಗಳಿಗೆ ನೀರು ತುಂಬಿಸುವ ₹ 1,200 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಸೊಲ್ಲಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಗುರುಸಿದ್ಧರಾಮ ಶಿವಯೋಗಿಯವರ 847ನೇ ಜಯಂತ್ಯುತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಈ ನೀರಾವರಿ ಯೋಜನೆಯು ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗಕ್ಕೆ ವರದಾನವಾಗಲಿದೆ. ನನ್ನ ಗುರಿ ರೈತ, ರೈತ ನಮ್ಮದಿಯಿಂದ ಬದುಕಬೇಕು ಎಂದರು

‘ಜನರ ಅಪೇಕ್ಷೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ. ಪೂಜ್ಯರು ನನ್ನ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ, ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕನಸುಗಳನ್ನು ನನಸು ಮಾಡಲು ಮೂರು ವರ್ಷದಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದರು.

ಗುರುಸಿದ್ಧರಾಮ ಶಿವಯೋಗಿಯವರು ಬಸವಣ್ಣನವರ ಸಮಕಾಲೀನರು. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಅಕ್ಷರಶಃ ಪಾಲಿಸಿದರು. ಕಾಯಕದಿಂದ ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಅರಿತಿದ್ದರು. ಆ ಮೂಲಕವೇ ಜನರನ್ನು ಅಧ್ಯಾತ್ಮದ ಕಡೆಗೆ ಸೆಳೆದರು ಎಂದು ಬಣ್ಣಿಸಿದರು.

‘ಕುಲದಲ್ಲಿ ಶೂದ್ರನಾದಡೆನು ಮನದಲ್ಲಿ ಮಾದೇವ ನೆಲೆಗೊಂಡವನೆ ವೀರಶೈವ ನೋಡಾ’ ಎನ್ನುವ ಮೂಲಕ ಅನುಭವಮಂಟಪದ ಅನುಭಾವಿಗಳು ಜನ್ಮಜಾತ ಜಾತಿಯಿಂದ ಪಾರಮ್ಯ ಸಾಧಿಸುವವರಲ್ಲ, ಬದಲಿಗೆ ಅನುಭವದ ಮೂಸೆಯಿಂದ ಮೂಡಿ ಬಂದವರು ಎಂದು ಗುರುಸಿದ್ಧರಾಮ ಶಿವಯೋಗಿಯವರು ಸಾರಿದರು. ಅವರು ನಿರ್ಮಿಸಿದ ಅನ್ನಛತ್ರ, ಗೋಶಾಲೆ ಇವೆಲ್ಲವೂ ಅವರಿಗೆ ಸಮಾಜದ ಮೇಲಿದ್ದ ಅನುಕಂಪ ಮತ್ತು ಪ್ರೀತಿಯ ದ್ಯೋತಕವಾಗಿವೆ ಎಂದರು.

ಸಿದ್ಧರಾಮ ಶಿವಯೋಗಿಗಳ ಬಗ್ಗೆ ಜನರಲ್ಲಿ ಭಕ್ತಿ, ಸಮರ್ಪಣಾ ಭಾವ ಇದೆ. ಈ ಉತ್ಸವಕ್ಕೆ ₹ 50 ಲಕ್ಷ ನೆರವು ನೀಡಿದ್ದೇವೆ. ಉತ್ಸವಗಳು ಯಶಸ್ವಿಯಾಗಿ ನೆರವೇರಲು ಸರ್ಕಾರ ಮತ್ತು ಜನರ ಸಹಕಾರ ಅಗತ್ಯ ಎಂದು ಹೇಳಿದರು.

‘ಕೆರೆ ತುಂಬಿಸುವ ಕೈಂಕರ್ಯ ಕೈಗೊಳ್ಳಿ’

ನಾಡಿನ ಎಲ್ಲ ಕೆರೆಗಳನ್ನು ತುಂಬಿಸುವ ಕೈಂಕರ್ಯ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಆದ್ಯ ಗಮನ ಹರಿಸಬೇಕು. ಕೆರೆಕೆಟ್ಟೆಗಳನ್ನು ತುಂಬಿಸಿದರೆ ಅದು ಸಿದ್ದರಾಮ ಶಿವಯೋಗಿಯವರಿಗೆ ಪ್ರಿಯವಾದ ಕಾರ್ಯ ಎಂದು ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಗತರಾಗಬೇಕು. ಅವರಿಗೆ ನೆನಪಿನ ಶಕ್ತಿ ಚೆನ್ನಾಗಿದೆ, ಎಲ್ಲವನ್ನು ನೆನಪಿಟ್ಟುಕೊಂಡು ಮಾಡುವ ಗುಣ ಇದೆ ಎಂದು ಶ್ಲಾಘಿಸಿದರು.

ರೈತರ ಸ್ಥಿತಿ ದುಃಸ್ಥಿತಿಗೆ ತಲುಪಿದೆ. ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಕಾಡಿದೆ. ಬೆಳೆ ನಷ್ಟವಾದಾಗ ಪರಿಹಾರ ತಕ್ಷಣ ರೈತರಿಗೆ ಒದಗುವಂತೆ ಮಾಡಬೇಕು ಎಂದರು.

ಸಮಾಜದಲ್ಲಿ ಜನ ದಿಕ್ಕು ತಪ್ಪಲು, ಮೌಲ್ಯಗಳು ನಾಶವಾಗಲು ಮೊದಲಾದ ಅನಾಹುತಗಳಿಗೆ ಮದ್ಯದ ಹಾವಳಿ ಕಾರಣವಾಗಿದೆ. ಮದ್ಯ ನಿಷೇಧಿಸಲು ಮುಖ್ಯಮಂತ್ರಿಯವರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮ ಶಿವಯೋಗಿಯವರು ಗುರಿ ಇಟ್ಟುಕೊಂಡು ಸಮಾಜಕ್ಕೆ ಬೇಕಾದ ಶಕ್ತಿ ತುಂಬಿದವರು. ಕರ್ಮಯೋಗಿಯಾಗಿದ್ದರು ಎಂದರು.

‘ಸಿದ್ದರಾಮೇಶ್ವರರ ಶಿವಯೋಗ ಎಲ್ಲರಿಗೆ ದಾರಿದೀಪ’

‘ನಮ್ಮೆಲ್ಲರ ಬದುಕಿನಲ್ಲಿ ಅತಿರೇಕ, ಆತಂಕ, ಉದ್ವೇಗ, ಉದ್ವಿಗ್ನ, ಉನ್ಮಾದ ಇದೆ. ಇದೆಲ್ಲದರ ನಿವಾರಣೆಗೆ ಸಿದ್ದರಾಮೇಶ್ವರರ ಶಿವಯೋಗ ನಮ್ಮೆಲ್ಲರಿಗೆ ದಾರಿದೀಪವಾಗಬೇಕು’ ಎಂದು ಚಿತ್ರದುರ್ಗದ ಬ್ರಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸಿದ್ದರಾಮೇಶ್ವರರು ಶಿವಯೋಗ ಸಾಧನೆ ಮಾಡಿದವರು. ಬದುಕಿನ ಅತಿರೇಕ, ಉದ್ವಿಗ್ನ, ಆತಂಕಗಳನ್ನು ತಹಬದಿಗೆ ತಂದುಕೊಂಡು ಇತಿಹಾಸವಾಗಿದ್ದಾರೆ. ಅವರು ದಿವ್ಯಜ್ಞಾನಿಗಳಾಗಿ ಕಂಗೊಳಿಸಿದವರು. ಅವರಿಗೆ ಭೂತ, ವರ್ತಮಾನ, ಭವಿಷ್ಯದ ಆಗುಹೋಗುಗಳು ಗೊತ್ತಾಗುತ್ತಿದ್ದವು ಎಂದರು.

ಸಿದ್ದರಾಮೇಶ್ವರ ವಚನಗಳು ಸಮಾಜಕ್ಕೆ ದಾರಿದೀಪ. ಅವರ ಸಾಹಿತ್ಯ ಕೃಷಿ ಮಾಡಬೇಕು ಎಂದು ಹೇಳಿದರು.

ಎಲ್ಲ ಕಡೆ ಜಲದ ಜಪ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಗೀರಥರಾಗಿ ನಾಡಿನ ಜಲದ ಬೇಡಿಕೆಯನ್ನು ನಿವಾರಿಸುತ್ತಾರೆ ಎಂಬ ವಿಶ್ವಾಸ ಇದೆ. ಅವರ ಮುಖದಲ್ಲಿ ಕಳೆ ಇದೆ. ಜನ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಅವರು ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT