ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ಸರ್ಕಾರಿ ಶಾಲೆಗೆ ಕಟ್ಟಡ ಕುಸಿತದ ಭೀತಿ

80 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆ, ಕಾರ್ಮಿಕರ ಮಕ್ಕಳೇ ಹೆಚ್ಚು
Published 20 ಮೇ 2023, 23:34 IST
Last Updated 20 ಮೇ 2023, 23:34 IST
ಅಕ್ಷರ ಗಾತ್ರ

ಕಳಸ: ಹಿರೇಬೈಲು ಆಸುಪಾಸಿನ ಹಲವಾರು ಮಂದಿ ವ್ಯಾಸಂಗ ಮಾಡಿರುವ ಹಿರೇಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ.

90 ವರ್ಷದ ಇತಿಹಾಸ ಇರುವ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗಿನ 80 ಮಕ್ಕಳು ಭವಿಷ್ಯದ ಕನಸು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಈ ಶಾಲಾ ಕಟ್ಟಡ ಈ ಮಳೆಗಾಲದಲ್ಲಿ ಕುಸಿಯಬಹುದು ಎಂಬ ಭೀತಿ ಮಕ್ಕಳಲ್ಲಿ ಆವರಿಸಿದೆ.

ಹಲವಾರು ವರ್ಷಗಳಿಂದ ಈ ಶಾಲೆಗೆ ಯಾವ ಅನುದಾನವೂ ಸಿಕ್ಕಿಲ್ಲ. ಕಾಲದ ಹೊಡೆತಕ್ಕೆ ಸಿಕ್ಕ ಕಟ್ಟಡವು ತನ್ನ ಕೊನೆ ದಿನಗಳನ್ನು ಎಣಿಸುತ್ತಿದೆ. ಶಾಲೆಯ ಕಚೇರಿ ಮತ್ತು ಮತಗಟ್ಟೆ ಬಿಟ್ಟರೆ ಉಳಿದ ಎಲ್ಲ ಕೊಠಡಿಗಳ ಗೋಡೆಯೂ ಬೀಳುವ ಸ್ಥಿತಿಯಲ್ಲಿದೆ. ಶಾಲೆಯಲ್ಲಿ ಶೌಚಾಲಯವೂ ಹದಗೆಟ್ಟಿದ್ದು, ಮಕ್ಕಳ ಸ್ಥಿತಿ ದಯನೀಯವಾಗಿದೆ.

ಕಳೆದ ಮಳೆಗಾಲದಲ್ಲಿ ಪೋಷಕರು ಶಾಲೆಯ ಗೋಡೆಗಳ ಸುತ್ತಲೂ ಪ್ಲಾಸ್ಟಿಕ್ ಶೀಟ್ ಹೊದಿಸಿ ಗೋಡೆ ಕುಸಿಯುವುದನ್ನು ತಡೆದಿದ್ದರು. ಆದರೆ, ಈ ವರ್ಷ ಗೋಡೆಗಳು ಇನ್ನಷ್ಟು ಅಪಾಯಕಾರಿಯಾಗಿ ಕಾಣುತ್ತಿವೆ ಎಂದು ಪೋಷಕರು ಹೇಳುತ್ತಾರೆ.

ಶಾಲೆಯಲ್ಲಿ ತೋಟ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಂಜೂರು ಆಗಿರುವ ಐದು ಶಿಕ್ಷಕರ ಹುದ್ದೆಗಳೂ ಖಾಲಿ ಇವೆ. ಇಲ್ಲಿಗೆ ನಿಯೋಜನೆಗೊಂಡಿರುವ ಒಬ್ಬ ಶಿಕ್ಷಕ ಇಡಕಿಣಿ ಮತ್ತು ಹಿರೇಬೈಲ್ ಶಾಲೆಗಳ ಉಸ್ತುವಾರಿ ಜೊತೆಗೆ ಪಾಠ ಮಾಡುವ ಸಾಹಸ ಮಾಡುತ್ತಿದ್ದಾರೆ.

‘ಈ ಶಾಲಾ ಕಟ್ಟಡದ ಸ್ಥಿತಿ ಬಗ್ಗೆ ಪಂಚಾಯಿತಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವಾರು ಬಾರಿ ವರದಿ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗೂ ಗಂಭೀರತೆ ವಿವರಿಸಿ ಮನವಿ ನೀಡಿದ್ದೇವೆ. ಆದರೆ, ಅಧಿಕಾರಿಗಳ ಸ್ಪಂದನೆಯೇ ಇಲ್ಲ’ ಎಂದು ಮರಸಣಿಗೆ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ಬೇಸರದಿಂದ ಹೇಳಿದರು.

ಈ ಶಾಲೆಗೆ 2 ಎಕರೆ ಭೂಮಿ ಇದ್ದರೂ, ಅದನ್ನು ಒತ್ತುವರಿ ಮಾಡಲಾಗಿದೆ. ಅದನ್ನು ಶಾಲೆಗೆ ಬಿಡಿಸಿಕೊಡಬೇಕು ಎಂದು ಆಗ್ರಹಿಸಿದರು.

ಹಿರೇಬೈಲು ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಆಗಲೇಬೇಕು. ಈ ಬಗ್ಗೆ ಹೋರಾಟ ನಡೆಸುತ್ತೇವೆ.
-ವಿಶ್ವನಾಥ್ ಮರಸಣಿಗೆ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT