ಪುತ್ತೂರು: ‘ಪಡಿತರ ಚೀಟಿಯಲ್ಲಿ ನನ್ನ ಹೆಸರು ಸೇರ್ಪಡೆ ಮಾಡಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗುವಂತೆ ಮಾಡಿ’ ಎಂದು ವೃದ್ಧೆಯೊಬ್ಬರು ಲೋಕಾಯುಕ್ತ ಅಧಿಕಾರಿಗಳ ಎದುರು ಮೊರೆ ಇಟ್ಟರು.
ಪುತ್ತೂರಿನ ಮಿನಿವಿಧಾನಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ಬುಧವಾರ ನಡೆದ ಲೋಕಾಯುಕ್ತ ಅದಾಲತ್‌ನಲ್ಲಿ ಕಬಕ ಗ್ರಾಮದ ಕುವೆತ್ತಮೂಲೆ ನಿವಾಸಿ ಮಾಲಿನಿ ಅವರು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡುವಂತೆ ಅಹವಾಲು ಸಲ್ಲಿಸಿದರು.
‘ವೃದ್ಧೆ ಕುಟುಂಬದಿಂದ ದೂರ ಆಗಿದ್ದಾರೆ. ಯಾರ ಆಶ್ರಯವೂ ಇಲ್ಲದೆ ಬದುಕುತ್ತಿದ್ದಾರೆ. ಕುಟುಂಬದ ಪಡಿತರ ಚೀಟಿಯಲ್ಲಿ ಅವರ ಹೆಸರು ಕೈಬಿಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ಕಾರ್ಡ್‌ನಲ್ಲಿ ಹೆಸರು ಸೇರಿಸಬೇಕಾಗಿದೆ. ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡಿದ ಅವರು, ‘ತಮಗೆ ವೃದ್ಧಾಪ್ಯ ವೇತನ ಬರುತ್ತಿದೆ. ಗೃಹಲಕ್ಷ್ಮಿ ಯೋಜನೆಯ ₹2 ಸಾವಿರ ಬರುವಂತಾಗಲು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು. ಲೋಕಾಯುಕ್ತ ಎಸ್.ಪಿ. ಸೈಮನ್ ಅವರು ಆಹಾರ ಇಲಾಖೆಯ ಅಧಿಕಾರಿಯನ್ನು ಕರೆದು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.
ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಎಂಬಲ್ಲಿ ಕೌಶಲ ಅಭವೃದ್ಧಿ ಯೋಜನೆಗೆ ಮೀಸಲಿಟ್ಟ ಸ್ಥಳವನ್ನು ಸ್ಥಳೀಯ ಪ್ರಭಾವಿಯೊಬ್ಬರು ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದರು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗೆ ಲೋಕಾಯುಕ್ತ ಎಸ್.ಪಿ ಸೈಮನ್ ಸೂಚಿಸಿದರು.
ಆಸ್ತಿ ವಿಭಾಗ ಪತ್ರ ನೋಂದಣಿಯಾಗಿದ್ದು, ನೋಂದಣಿ ಕಚೇರಿಯಿಂದ ಭೂಮಿ ಶಾಖೆಗೆ ಮಾಹಿತಿ ಲಾಗಿನ್ ಆಗುತ್ತಿಲ್ಲ. ಹಾಗಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಸೇಸಪ್ಪ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದರು.
ಡಿವೈಎಸ್‌ಪಿ ಚೆಲುವರಾಜು, ಇನ್‌ಸ್ಪೆಕ್ಟರ್ ವಿನಾಯಕ ಬಿಲ್ಲವ, ಸಿಬಂದಿ ರಾಧಾಕೃಷ್ಣ, ಶರತ್, ವೈಶಾಲಿ, ಆದರ್ಶ್ ಕಾಣಿಯೂರು, ಬಾಲರಾಜ್, ಯತೀಶ್, ದುಂಡಪ್ಪ, ರಾಜಶೇಖರ್ ಮತ್ತು ನವೀನ್ ಇದ್ದರು. ತಹಶೀಲ್ದಾರ್ ಶಿವಶಂಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕಿ ರಮಾದೇವಿ, ಉಪ ತಹಶೀಲ್ದಾರ್ ಲೋಕೇಶ್ ಮತ್ತು ರಾಮಣ್ಣ ನಾಯ್ಕ್, ತಾಲ್ಲೂಕು ಪಂಚಾಯಿತಿ ಸಿಬಂದಿ ಪ್ರವೀಣ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.