ಗುರುವಾರ , ಅಕ್ಟೋಬರ್ 22, 2020
21 °C
ಕಾಫಿ, ಅಡಿಕೆ, ಕರಿಮೆಣಸು ಬೆಳೆಗಳಿಗೆ ರೋಗ ಬಾಧೆ– ವಿಶೇಷ ಪ್ಯಾಕೇಜ್‌ಗೆ ಒತ್ತಾಯ

ಕೊಟ್ಟಿಗೆಹಾರ: ಧಾರಾಕಾರ ಮಳೆ, ಬೆಳೆಗಾರರಿಗೆ ಬರೆ

ಅನಿಲ್‍ಮೊಂತೆರೊ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ಕಾಫಿನಾಡಿನಾದ್ಯಂತ ವ್ಯಾಪಕ ಮಳೆ ಸುರಿದು, ಕಾಫಿ ಬೆಳೆಯು ಶೀತದಿಂದ ಕೊಳೆರೋಗ ಬಾಧಿಸಿದೆ. ಇದರಿಂದ ಕಾಫಿ ಕಾಯಿ ಉದುರತೊಡಗಿದ್ದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ನಾಲ್ಕೈದು ದಿನಗಳಿಂದ ಬಣಕಲ್, ಬಾಳೂರು, ಕೊಟ್ಟಿಗೆಹಾರ, ತರುವೆ, ಬಿನ್ನಡಿ, ಬಣಕಲ್, ನಿಡುವಾಳೆ, ಚಕ್ಕೋಡು ಸೇರಿದಂತೆ ಹಲವು ಕಡೆ ಗಾಳಿಯಿಂದ ಕೂಡಿದ ಧಾರಾಕಾರ ಮಳೆಯು ರೈತರ ನಿದ್ದೆಯನ್ನು ಕಂಗೆಡಿಸಿದೆ. ಕಷ್ಟಪಟ್ಟು ಬೆಳೆಗೆ ಔಷಧಿ ಸಿಂಪಡಿಸಿ ಇನ್ನೇನು ಉತ್ತಮ ಫಸಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ನಿರಾಸೆ ತಂದೊಡ್ಡಿದೆ.

ಕಾಯಿ ಬಿಟ್ಟಿದ್ದ ಕಾಫಿ ಬೆಳೆ ಅತಿಯಾದ ಮಳೆಗೆ ಉದುರಿ ಕೆಲವು ತೋಟಗಳಲ್ಲಿ ಬರೀ ಕಾಫಿ ಕೊಂಬೆಯ ಕೊರಡು ಉಳಿದಿದೆ. ಬಹುತೇಕ ರೈತರು ಮುಂದಿನ ಬಾರಿಯಾದರೂ ಉತ್ತಮ ಫಸಲು ತೆಗೆದು ಸಾಲಸೂಲ ಕಟ್ಟಿ ನೆಮ್ಮದಿಯ ಬದುಕು ಸಾಗಿಸಬೇಕೆಂಬ ನಿರೀಕ್ಷೆ ಹುಸಿಯಾಗಿದ್ದು, ಈ ಮಳೆಯಿಂದ ಕಮರಿ ಹೋಗಿದೆ. ಮಳೆಗೆ ಬರೀ ಕಾಫಿ ಮಾತ್ರ ಕೊಳೆ ರೋಗಕ್ಕೆ ತುತ್ತಾಗಿಲ್ಲ. ಅಡಿಕೆ, ಕಾಳುಮೆಣಸು, ಬಾಳೆ, ಏಲಕ್ಕಿ ಕೂಡ ನೆಲಕಚ್ಚಿ ರೈತರು ನಷ್ಟ ಅನುಭವಿಸುವಂತಾಗಿದೆ.

‘ಕಳೆದ ಬಾರಿ ಸುರಿದ ಮಳೆಗೆ ಅನೇಕ ರೈತರು ಕಾಫಿ, ಕಾಳುಮೆಣಸು, ಬಾಳೆ ಮತ್ತಿತರ ಬೆಳೆ ಹಾನಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸರ್ಕಾರದಿಂದ ಪರಿಹಾರ ಇನ್ನೂ ಸಿಕ್ಕಿಲ್ಲ. ಮತ್ತೆ ಮಳೆಗೆ ತೋಟಗಳಲ್ಲಿ ಗಿಡಗಳ ಕೊನೆಗಳು, ಅಡಿಕೆ ಮರಗಳು ಮುರಿದು ಅಪಾರ ಹಾನಿ ಸಂಭವಿಸಿದೆ. ಬೆಳೆಗಾರರು ತಲೆಮೇಲೆ ಕೈ ಇಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬೆಳೆಗಾರರಾದ ಊರುಬಗೆ ರತನ್ ಆತಂಕ ವ್ಯಕ್ತ ಪಡಿಸಿದ್ದಾರೆ.

‘ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ಇಲ್ಲಿನ ನೈಜ ಪರಿಸ್ಥಿತಿಯನ್ನು ಸಕಾರದ ಗಮನಕ್ಕೆ ತಂದು, ರೈತರು, ಬೆಳೆಗಾರರಿಗೆ ಸಮರ್ಪಕ ಯೋಜನೆ ರೂಪಿಸಲು ಸಹಕಾರಿಯಾಗಬೇಕಿದೆ. ಕಾಫಿ, ಕಾಳುಮೆಣಸು, ಬಾಳೆ, ಏಲಕ್ಕಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದರೆ ಇತರ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬೆಳೆಗಾರರ ಚೇತರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ ತುರ್ತು ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂಬುದು ಬೆಳೆಗಾರರ ಒಕ್ಕೊರಲ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು