ಗುರುವಾರ , ಜುಲೈ 29, 2021
23 °C
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ– ಅರಣ್ಯ ಇಲಾಖೆ ಕಚೇರಿಯಲ್ಲಿ ಸಭೆ

ಮೂಡಿಗೆರೆ| 432 ಮರ ಕತ್ತರಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಪಟ್ಟಣದ ಹ್ಯಾಂಡ್ ಪೋಸ್ಟಿನಿಂದ – ಕೊಟ್ಟಿಗೆಹಾರದವರೆಗಿನ ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆಗೆ ಇಕ್ಕೆಲದಲ್ಲಿರುವ 432 ಮರಗಳನ್ನು ಕತ್ತರಿಸಲು ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬಾರದ ಕಾರಣ ಅವುಗಳನ್ನು ತೆರವುಗೊಳಿಸಲು ನಿರ್ಧರಿಸಲಾಯಿತು.

ಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಅಡ್ಡಿಯಾಗಿರುವ ಇಕ್ಕೆಲದ ಮರಗಳ ಕಟಾವಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಹವಾಲು ಸಭೆ ನಡೆಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಮುನಿರಾಜು ಮಾತನಾಡಿ, ‘ಹ್ಯಾಂಡ್‍ಪೋಸ್ಟ್‌ನಿಂದ ಕೊಟ್ಟಿಗೆಹಾರದವರೆಗೆ ಹತ್ತು ಮೀ. ರಸ್ತೆ ಹಾಗೂ 6 ಮೀ.ನಲ್ಲಿ ಶೋಲ್ಡರ್ ಹಾಗೂ ಚರಂಡಿ ನಿರ್ಮಿಸುವುದು ಸೇರಿದಂತೆ ಒಟ್ಟು 16 ಮೀ ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಇದು 2018 ರಲ್ಲಿಯೇ ಆಗಬೇಕಿತ್ತು. ಶಿರಾಡಿ ಘಾಟ್ ಬಂದ್ ಆಗಿದ್ದರಿಂದ ಇದೇ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ತಡವಾಗಿದೆ. ರಸ್ತೆ ವಿಸ್ತರಣೆಗಾಗಿ ಸರ್ವೆ ನಡೆಸಿದಾಗ ವಿವಿಧ ಜಾತಿಯ 432 ಮರಗಳನ್ನು ತೆರವುಗೊಳಿಸಬೇಕಾಗಿದೆ. ಮಳೆಗಾಲ ಮುಗಿದ ಮೇಲೆ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ‘ರಸ್ತೆ ವಿಸ್ತರಣೆಗೆ ರಸ್ತೆ ಬದಿಯಲ್ಲಿರುವ ಹಲಸು, ಮಹಾಗನಿ, ಹೊನ್ನೆ, ನೇರಳೆ, ಅಕೇಶಿಯಾ, ಸಾಗುವಾನೆ, ಸಿಲ್ವರ್ ಸೇರಿದಂತೆ ವಿವಿಧ ಜಾತಿಯ 432 ಮರವನ್ನು ಕಡಿಯಬೇಕಾಗುತ್ತದೆ. ಮರ ಕಡಿತಲೆಗೊಳಿಸಿದ ಮೇಲೆ ಕಡಿತಲೆಗೊಂಡ ಮರಗಳ ಹತ್ತು ಪಟ್ಟು ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತದೆ. ಈ ಕಡಿತಲೆಯಲ್ಲಿ ಸರ್ಕಾರಿ ಜಾಗದಲ್ಲಿರುವ ಐವತ್ತಕ್ಕೂ ಅಧಿಕ ಮರಗಳನ್ನು ಕಡಿತಲೆಗೊಳಿಸಲು ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾ
ಗುತ್ತದೆ. ಆದ್ದರಿಂದ ಸಭೆ ನಡೆಸಲಾಗು ತ್ತಿದ್ದು, ಯಾವುದೇ ಆಕ್ಷೇಪಣೆ ಇದ್ದರೂ ಸಲ್ಲಿಸಬಹುದು. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಮರಗಳ ಕಡಿತಲೆಗೆ ನಿರ್ಧರಿಸಲಾಗುವುದು’ ಎಂದರು.

‘ರಸ್ತೆ ವಿಸ್ತರಣೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಮರಗಳ ಕಡಿತಲೆ ಮಾಡಿದ ಕೂಡಲೇ ಹೊಸ ಗಿಡಗಳನ್ನು ನೆಟ್ಟು ಆರೈಕೆ ಮಾಡಬೇಕು. ಮಳೆಗಾಲ ಮುಕ್ತಾಯಗೊಂಡ ಕೂಡಲೇ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು’ ಎಂದು ಸಭೆಯ ಲ್ಲಿದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್, ಉಪ ವಲಯ ಅರಣ್ಯಾಧಿಕಾರಿ ಚಿದಾನಂದ, ರಮೇಶ್, ಹೇಮಶೇಖರ್, ಪ್ರಶಾಂತ್, ಅರುಣ ಗುತ್ತಿ, ಶರತ್ ಹೆಸಗೋಡು, ಮಜೀದ್, ಗೋಪಾಲ, ಮಂಜುನಾಥ್ ಭೈರಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು