ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ–ಕಾಲೇಜುಗಳಲ್ಲಿ ಜಾನಪದ ವಿಭಾಗ ಅಗತ್ಯ: ಅಪ್ಪಗೆರೆ

Published : 6 ಸೆಪ್ಟೆಂಬರ್ 2024, 15:44 IST
Last Updated : 6 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ‘ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿರುವ ಯುವ ಪೀಳಿಗೆಯನ್ನು ಅದರಿಂದ ಹೊರ ತಂದು ಅವರಿಗೆ ನಮ್ಮ ಸಂಸ್ಕೃತಿ ಕಲಿಸಬೇಕಾದರೆ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಜಾನಪದ ವಿಭಾಗವನ್ನು ತೆರೆಯಬೇಕು’ ಎಂದು ಗಾಯಕ ಅಪ್ಪಗೆರೆ ತಿಮ್ಮರಾಜು ಸಲಹೆ ನೀಡಿದರು.

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥ ಹಾಗೂ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ನಗರದ ಬಿಜಿಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಗೀತೆಗಳ ಗಾಯನ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿರುವ ನಾವು, ನಮ್ಮ ಹಿರಿಯರು ಕಟ್ಟಿಕೊಟ್ಟಿರುವ ಜಾನಪದವನ್ನು ಮರೆತಿದ್ದೇವೆ.  ಪರಿಣಾಮ ನಾವು ಮಹಾ ಜ್ಞಾನಿಗಳು, ಶಿಕ್ಷಣವಂತರು, ಎಲ್ಲವನ್ನೂ ತಿಳಿದವರು ಎನ್ನುವ ರೀತಿ ವರ್ತಿಸುತ್ತಿದ್ದೇವೆ. ಆದರೆ ನಮ್ಮೊಳಗಿನ ಭಾವನೆಗಳನ್ನು ಕಳೆದುಕೊಂಡು ಪ್ರೀತಿ, ವಿಶ್ವಾಸ, ಸ್ನೇಹ, ಬಾಂಧವ್ಯ ಮತ್ತು ಭಾವನೆಗಳಿಲ್ಲದೇ ಬರಡಾಗಿ ಬದುಕುತ್ತಿದ್ದೇವೆ’ ಎಂದು ವಿಷಾದಿಸಿದರು.

ಭಾಷಣಗಳಿಂದ, ಜಾನಪದ ಹಬ್ಬ, ಜಾನಪದ ದಿನಾಚರಣೆಗಳಿಂದ ಜಾನಪದ ಉಳಿಯುವುದಿಲ್ಲ. ಅದು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ನಾಡಿನೆಲ್ಲಡೆ ಇರುವ ಜಾನಪದ ಕಲೆಗಳನ್ನು ಪಠ್ಯ ಪುಸ್ತಕಕ್ಕೆ ಅಳವಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ‘ಜಾನಪದ ಈ ನೆಲದ ಸಂಸ್ಕೃತಿ, ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದನ್ನು ನಾವು ಕಳೆದುಕೊಂಡರೆ ಜಗತ್ತಿನೆದುರು ನಮ್ಮತನವನ್ನು ಕಳೆದುಕೊಂಡು ಒಂಟಿಯಾಗಿ ನಿಲ್ಲಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಗೆ ಸುಧೀರ್, ‘ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಉದ್ದೇಶದಿಂದ ಶಾಲಾ– ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಜೆ.ಜಿ. ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಬಿಜಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಆರ್. ಚಂದ್ರಶೇಖರ್, ಸಂಗೀತ ಶಿಕ್ಷಕಿ ಸುಮಾ ಪ್ರಸಾದ್, ನೃತ್ಯ ಶಿಕ್ಷಕಿ ವೀಣಾ ಅರವಿಂದ್, ಶಿಕ್ಷಕಿ ಅನಿತಾ, ವಿದ್ಯಾರ್ಥಿಗಳಾದ ತೃಪ್ತಿ, ಪುಣ್ಯ, ಯಶಸ್ವಿನಿ ಉಪಸ್ಥಿತರಿದ್ದರು. ಗಾಯಕರಾದ ಅಭಿಷೇಕ್, ಮಂಜುಳಾ ಗಾಯನದಲ್ಲಿ ಪಾಲ್ಗೊಂಡು ಸಭೆಯಲ್ಲಿ ಸಂಚಲನ ಮೂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT