ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ಕುಸಿತ: ದತ್ತ ಆಕ್ರೋಶ

ಜಾತ್ಯತೀತ ಹೋರಾಟ ನಡೆಸಲು ಚಿಂತನೆ– ಶೀಘ್ರದಲ್ಲಿ ಸಮಾನ ಮನಸ್ಕರ ಸಭೆ
Last Updated 1 ಅಕ್ಟೋಬರ್ 2021, 3:59 IST
ಅಕ್ಷರ ಗಾತ್ರ

ಕಡೂರು: ‘ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ ಪರಿಣಾಮ ಏನು ಎಂಬುದನ್ನು ಈರುಳ್ಳಿ ಬೆಳೆದವರ ಸಂಕಷ್ಟಗಳೇ ಸಾರಿ ಹೇಳುತ್ತಿವೆ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ತಾಲ್ಲೂಕಿನ ಗಿರಿಯಾಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ರೈತರ ಮನೆಯ ಬಾಗಿಲಿಗೆ ಖರೀದಿದಾರರು ಬರುತ್ತಾರೆ. ಬೆಳೆದ ಬೆಳೆಯನ್ನು ರೈತ ದೇಶದ ಯಾವ ಮೂಲೆಯಲ್ಲಾದರೂ ಮಾರಾಟ ಮಾಡಬಹುದು ಎಂದೆಲ್ಲ ಬೊಬ್ಬೆ ಹೊಡೆದಿದ್ದ ಕೇಂದ್ರವು ಈಗ ಈರುಳ್ಳಿ ಬೆಳೆದವರತ್ತ ಕಣ್ಣೆತ್ತಿ ನೋಡುತ್ತಿಲ್ಲ’ ಎಂದು ಟೀಕಿಸಿದರು.

‘ತಾಲ್ಲೂಕಿನಲ್ಲಿಯೇ ಅತ್ಯುತ್ತಮ ಈರುಳ್ಳಿ ಬೆಳೆಯುವ ಪ್ರದೇಶ ಎಂದು ಕರೆಸಿಕೊಳ್ಳುವ ಹಿರೇನಲ್ಲೂರು, ಗಿರಿಯಾಪುರ, ಬಿಸಲೇರೆ, ಬಾಸೂರು ಗ್ರಾಮದ ರೈತರು ಬೆಳೆದ ಈರುಳ್ಳಿ ಖರೀದಿಸುವವರೇ ಇಲ್ಲ. ಅವರು ಕಣ್ಣೀರು ಹರಿಸುತ್ತಿದ್ದರೂ ಇದುವರೆಗೂ ಯಾವುದೇ ಇಲಾಖೆಯ ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಂದರೂ ನಂತರ ಮುಂಗಾರು ಕೈಕೊಟ್ಟು ರೈತರು ಕಂಗೆಟ್ಟಿದ್ದಾರೆ. ರಾಗಿ ಬೆಳೆ ಒಣಗುವ ಹಂತದಲ್ಲಿದೆ. ಆಲೂಗಡ್ಡೆ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಸಹ ಮಳೆ ಕೊರತೆಯಿಂದ ಹಾಳಾಗುವ ಸಂಭವವಿದೆ. ಬಹುತೇಕ ಬರ ಪರಿಸ್ಥಿತಿಯಿದ್ದರೂ ಅಧಿಕಾರಿಗಳು ಕಡೂರನ್ನು ಅತಿವೃಷ್ಟಿ ಪ್ರದೇಶ ಎಂಬಂತೆ ಬಿಂಬಿಸಿದ್ದಾರೆ. ಬರಪೀಡಿತ ಎಂದು ಘೋಷಣೆಯಾಗಿದ್ದಿದ್ದರೆ ರೈತರಿಗೆ ಬೆಳೆ ನಷ್ಟದ ಪರಿಹಾರವಾದರೂ ಸಿಗುವ ಸಂಭವವಿತ್ತು. ಈಗ ಅದಕ್ಕೂ ಅವಕಾಶವಿಲ್ಲದಂತಾಗಿರುವುದು ದೌರ್ಭಾಗ್ಯವೇ ಸರಿ’ ಎಂದರು.

‘ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಮಲೆನಾಡಿನ ತಾಲ್ಲೂಕು ಗಳಿಗೆ ಭೇಟಿ ನೀಡುತ್ತಾರೆ. ಆದರೆ, ಕಡೂರಿಗೆ ಬರುವುದಕ್ಕೆ ಸಮಯವಿಲ್ಲ. ಅದು ಬರಪೀಡಿತ ಪ್ರದೇಶ. ಅಲ್ಲಿಗೆ ಭೇಟಿ ನೀಡಿದರೆ ಏನು ಪ್ರಯೋಜನವೆಂಬ ತಾತ್ಸಾರ ಅವರಿಗಿರಬಹುದು. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರ ಜಠರಾಗ್ನಿ ಸ್ಫೋಟವಾದರೆ ಯಾವ ಸಾಮ್ರಾಜ್ಯವೂ ಉಳಿಯದು ಎಂಬ ಕುವೆಂಪು ಸಾಲುಗಳನ್ನು ಉಲ್ಲೇಖಿಸಿದ ಅವರು, ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್ ಕಾರಣದಿಂದ ಕೇರಳಕ್ಕೆ ಈರುಳ್ಳಿ ಹೋಗುತ್ತಿಲ್ಲ. ವ್ಯಾಪಾರಿಗಳು ಮಹಾರಾಷ್ಟ್ರ ಮುಂತಾದೆಡೆಯ ಈರುಳ್ಳಿ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲಿನ ಈರುಳ್ಳಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಯ ನೇರ ಪರಿಣಾಮವಿದು’ ಎಂದರು.

‘ರೈತರ ಸಂಕಷ್ಟ ಕಂಡು ಅವರಿಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಜಾತ್ಯತೀತವಾಗಿ ಹೋರಾಟ ನಡೆಸಲು ಚಿಂತನೆ ನಡೆಸಿದ್ದು, ಅತೀ ಶೀಘ್ರದಲ್ಲಿಯೇ ಸಮಾನ ಮನಸ್ಕರೆಲ್ಲ ಸಭೆ ಸೇರಿ ಹೋರಾಟದ ರೂಪರೇಷೆ
ಗಳನ್ನು ನಿರ್ಧರಿಸಲಾಗುವುದು. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ’ ಎಂದು
ಸ್ಪಷ್ಟಪಡಿಸಿದರು.

ಗಿರಿಯಾಪುರದ ರೈತರಾದ ಜಿ.ಸ್ವಾಮಿ, ಲಿಂಗರಾಜ್, ಜಿ.ಪಿ.ಪ್ರಭುಕುಮಾರ್, ಬಿಸಲೆರೆ ಕೆಂಪರಾಜ್, ಸತೀಶ್, ಶಿವಲಿಂಗಸ್ವಾಮಿ, ಹಿರೇನಲ್ಳುರು ಪಂಚಾಕ್ಷರಿ, ಶಿಕ್ಷಕ ಷಡಕ್ಷರಿ, ನವೀನ್, ಚಿದಾನಂದ, ಮುರುಳಿ, ತೋಟೇಶ್, ಉದಯಕುಮಾರ್, ಅರಣ್‌ಕುಮಾರ್, ಯರದಕೆರೆ ರಾಜಪ್ಪ, ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT