ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಬೀಗ ಹಾಕಲು ಗ್ರಾಮಸ್ಥರ ನಿರ್ಧಾರ

ಶಿಕ್ಷಕರೇ ಇಲ್ಲದ ಜಾಂಬಳೆ ಶಾಲೆ: ಶಿಕ್ಷಕರ ನೇಮಕಕ್ಕೆ 15 ದಿನಗಳ ಗಡುವು
Last Updated 22 ಆಗಸ್ಟ್ 2022, 2:58 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ಕುದುರೆಮುಖ ಸಮೀಪದ ಜಾಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಯಂ ಶಿಕ್ಷಕರೇ ಇಲ್ಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಜಾಂಬಳೆ ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗಿನ 42 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ಎಲ್ಲ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಸದ್ಯ ಶಾಲೆಯಲ್ಲಿ 3 ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.

ಕುದುರೆಮುಖ ಸರ್ಕಾರಿ ಶಾಲೆ ಬಾಗಿಲು ಮುಚ್ಚಿದ ಮೇಲೆ ಜಾಂಬಳೆ ಶಾಲೆ ಆಸುಪಾಸಿನ ಹತ್ತಾರು ಗ್ರಾಮಗಳ ಬಡ ಮಕ್ಕಳಿಗೆ ಏಕೈಕ ಶಾಲೆ ಆಗಿದೆ.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಂದ್ರ, ‘ನಮ್ಮ ಶಾಲೆಯಲ್ಲಿ ಮುಖ್ಯಶಿಕ್ಷಕರು ಕೂಡ ಇಲ್ಲ. ಕಾಯಂ ಶಿಕ್ಷಕರೂ ಇಲ್ಲದೆ ನಮ್ಮ ಶಾಲೆಯಲ್ಲಿ ವಿದ್ಯೆ ಅರಸಿ ಬರುವ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. 15 ದಿನದಲ್ಲಿ ಮುಖ್ಯಶಿಕ್ಷಕರ ನೇಮಕ ಮಾಡಿದ್ದರೆ, ನಾವು ಶಾಲೆಗೆ ಬೀಗ ಹಾಕಿ ಧರಣಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಜಾಂಬಳೆ ಶಾಲೆಯ ಶಿಕ್ಷಕರ ಕೊರತೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರೆ ಮಾಡಿದರೆ, ಅತಿಥಿ ಶಿಕ್ಷಕರನ್ನು ಕೊಟ್ಟಿದ್ದೇವೆ. ಕಾಯಂ ಶಿಕ್ಷಕರು ಬೇಕಾದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರೆ' ಎಂದು ಪೋಷಕರಾದ ರಾಜೇಂದ್ರ ಅಸಮಾಧಾನ ಹೊರಹಾಕುತ್ತಾರೆ.

ಮತ್ತೊಬ್ಬ ಪೋಷಕ ರಾಮಪ್ರಕಾಶ್ ಕೆಂಗನಕೊಂಡ ಮಾತನಾಡಿ, ‘ಶಾಲಾ ಮಕ್ಕಳಿಗೆ ಬಿಸಿಯೂಟ, ಪುಸ್ತಕ, ಸಮವಸ್ತ್ರ ಕೊಡಲಾಗುತ್ತಿದೆ. ಆದರೆ, ಶಿಕ್ಷಕರೇ ಇಲ್ಲದಿದ್ದ ಮೇಲೆ ಇವೆಲ್ಲಾ ವ್ಯರ್ಥ ಅಲ್ಲವೇ. ಶಾಲೆಗೆ ಶಿಕ್ಷಕರ ನೇಮಕ ತುರ್ತಾಗಿ ಆಗಬೇಕು’ ಎಂದು ಆಗ್ರಹಿಸುತ್ತಾರೆ.

ಬಿಳಗಲ್ ಪ್ರದೇಶದಲ್ಲಿ ಶಾಲೆ ಮುಚ್ಚಿದ ನಂತರ ಕುದುರೆಮುಖ ಶಾಲೆಗೆ ಹೋಗುತ್ತಿದ್ದ ಬಿಳಗಲ್‍ನ ಗಿರಿಜನ ಪಂಗಡದ ಮಕ್ಕಳು ಆ ಶಾಲೆ ಮುಚ್ಚಿದ ನಂತರ ಅತಂತ್ರರಾದರು. 10 ಕಿ.ಮೀ. ದೂರದ ಜಾಂಬಳೆ ಶಾಲೆಗೆ ದಾಖಲಾದ ಆ ಮಕ್ಕಳಿಗೆ ಈಗ ಆ ಶಾಲೆಯಲ್ಲೂ ಶಿಕ್ಷಕರ ಕೊರತೆಯಿಂದ ವಿದ್ಯೆ ಗಗನಕುಸುಮವೇ ಆಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT