ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳಸ ತಾಲ್ಲೂಕು ಕೇಂದ್ರ: ಕಂದಾಯ ಸಚಿವರ ಭೇಟಿಗೆ ನಿರ್ಧಾರ

Published 30 ಜೂನ್ 2024, 13:55 IST
Last Updated 30 ಜೂನ್ 2024, 13:55 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕು ಕೇಂದ್ರದ ಅಭಿವೃದ್ಧಿ ಬಗ್ಗೆ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲು ಕಳಸ ತಾಲ್ಲೂಕು ಸಮಗ್ರ ಅಭಿವೃದ್ಧಿ ಸಮಿತಿ ತೀರ್ಮಾನಿಸಿದೆ.

ಭಾನುವಾರ ಕಳಸ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಮಂಜಪ್ಪಯ್ಯ, ‘ಸಂಸದ ಶ್ರೀನಿವಾಸ ಪೂಜಾರಿ ಕಳಸ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಕಂದಾಯ ಸಚಿವರ ಬಳಿಗೆ ನಿಯೋಗ ಕರೆದೊಯ್ಯುವ ಸಲಹೆ ನೀಡಿದ್ದಾರೆ. ಈ ಪ್ರಯತ್ನ ಫಲ ನೀಡದಿದ್ದರೆ ಮಾತ್ರ ಹೋರಾಟದ ಹಾದಿ ಹಿಡಿಯುವಂತೆ ಸೂಚನೆ ನೀಡಿದ್ದಾರೆ’ ಎಂದರು.

ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ ಕೂಡ ನಿಯೋಗದ ಜೊತೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಆನಂತರ ಜಿಲ್ಲಾಧಿಕಾರಿ ಭೇಟಿ ಮಾಡಿ ತಾಲ್ಲೂಕು ಕೇಂದ್ರಕ್ಕೆ ಭೂಮಿ ಕೊಡುವಂತೆ ಆಗ್ರಹಿಸಲಾಗುವುದು ಎಂದು ಮಂಜಪ್ಪಯ್ಯ ಹೇಳಿದರು.

ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೂಡ ಕಳಸ ತಾಲ್ಲೂಕಿಗೆ ಅಗತ್ಯ ಬೆಂಬಲ ಕೊಡುವ ಭರವಸೆ ನೀಡಿದ್ದಾರೆ. ವಿಧಾನಪರಿಷತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಕೂಡ ಕಳಸ ತಾಲ್ಲೂಕು ಕೇಂದ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ’ ಎಂದರು.

ಈ ಪ್ರಯತ್ನಗಳು ಫಲ ಕೊಡದಿದ್ದಲ್ಲಿ ಕಳಸ ತಾಲ್ಲೂಕಿನ ಕೇಂದ್ರದ ಅಭಿವೃದ್ಧಿಯಲ್ಲಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಲೋಕಾಯುಕ್ತರಿಗೂ ಈ ಬಗ್ಗೆ ದೂರು ಕೊಡುವ ಸಾಧ್ಯತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ವಿವಿಧ ಸಂಘಟನೆಗಳ ಮುಖಂಡರಾದ ಸಂತೋಷ್, ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್, ನಾಗಭೂಷಣ್, ನಾಗೇಶ್, ವೆಂಕಟಸುಬ್ಬಯ್ಯ, ರಂಗನಾಥ್, ಕುಮಾರಸ್ವಾಮಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT