ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

Published 11 ಜುಲೈ 2024, 14:32 IST
Last Updated 11 ಜುಲೈ 2024, 14:32 IST
ಅಕ್ಷರ ಗಾತ್ರ

ಕಡೂರು: ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಜುಲೈ 13ರಂದು ಕಡೂರು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಹೊಸೂರು ಪುಟ್ಟರಾಜು ಆಯ್ಕೆಯಾಗಿದ್ದಾರೆ. 13ರಂದು ಬೆಳಿಗ್ಗೆ 9ಕ್ಕೆ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಚಿಂತಕ ಶರತ್ ಕೃಷ್ಣಮೂರ್ತಿ ಉದ್ಘಾಟಿಸಲಿದ್ದು, ವೆಂಕಟೇಶ್ವರ ದೇವಸ್ಥಾನದಿಂದ ಸಮ್ಮೇಳನ ಸ್ಥಳದವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಷಿ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಸಂಸದ ಶ್ರೇಯಸ್ ಪಟೇಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಮ್ಮೇಳನದಲ್ಲಿ 4 ಗೋಷ್ಠಿ ನಡೆಯಲಿದೆ ಎಂದರು.

‘ಕಡೂರಿನ ಇತಿಹಾಸ ಬಿಂಬಿಸುವ ತಾಲ್ಲೂಕು ದರ್ಶನ ಗೋಷ್ಠಿ’ಯಲ್ಲಿ ಇತಿಹಾಸ ಸಂಶೋಧಕ ಹಿರೇನಲ್ಲೂರು ಪಾಂಡುರಂಗ ಪ್ರಬಂಧ ಮಂಡಿಸುವರು. ‘ಕೃಷಿ ಗೋಷ್ಠಿ’ಯಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡುವರು. ಪತ್ರಕರ್ತ ಸ.ಗಿರಿಜಾ ಶಂಕರ ಅಧ್ಯಕ್ಷತೆಯಲ್ಲಿ ಮಾಧ್ಯಮ ಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತರನ್ನು ಗೌರವಿಸಲಾಗುವುದು. ಕವಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸುವರು. ಸಾಹಿತಿ ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡುವರು’ ಎಂದು ಶ್ರೀನಿವಾಸ್ ಮಾಹಿತಿ ನೀಡಿದರು.

ಕನ್ನಡ ಪರ ಹೋರಾಟಗಾರ ಕೆ.ವಿ.ವಾಸು, ಚಿಂತಕರಾದ ಸಿ‌.ಕೆ.ಬಸವರಾಜಪ್ಪ, ಎಲ್.ಪುಟ್ಟಕರಿಯಪ್ಪ ಅವರಿಗೆ ‘ಕನ್ನಡಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಪ್ರಶಸ್ತಿ ಪ್ರದಾನ ಮಾಡುವರು. ಕೇಂದ್ರ ಯುವ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಪುರಸ್ಕೃತೆ ಬಿ.ಆರ್.ಶೃತಿ, ಸಾಹಿತಿ ಪಿ.ಎಚ್.ವಿಜಯಲಕ್ಷ್ಮಿ, ಮರವಂಜಿ ವಿಜಯ ಕುಮಾರ್ ಅವರಿಗೆ ‘ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ’ ಮಾಡಲಾಗುವುದು. ಚಿಂತಕ ವೈ.ಎಸ್.ವಿ.ದತ್ತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT