ಶನಿವಾರ, ಮೇ 28, 2022
31 °C
ಕರವೇ ಕಾರ್ಯಕರ್ತರಿಂದ ತಾಲ್ಲೂಕು ಕಚೇರಿ ಮುತ್ತಿಗೆಗೆ ಯತ್ನ

ಚಿಕ್ಕಮಗಳೂರು: ಶಿವಸೇನೆ, ಎಂಇಎಸ್ ನಿಷೇಧಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ರಾಜ್ಯದಲ್ಲಿ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕ್ರಮ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹನುಮಂತಪ್ಪ ವೃತ್ತದಲ್ಲಿ ಸೇರಿದ್ದ ಪ್ರತಿಭಟನಕಾರರು, ತಾಲ್ಲೂಕು ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಶಿವಸೇನೆ ಹಾಗೂ ಎಂಇಎಸ್ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿಗೆ ಮತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ‘ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮೇಹರ್‌ಚಂದ್ ಮಹಾಜನ್ ಆಯೋಗ ಸ್ಥಾಪಿಸಿತ್ತು. ಆಯೋಗವು ತನಿಖೆ ನಡೆಸಿ, ಬೆಳಗಾವಿಯು ಕರ್ನಾಟಕಕ್ಕೆ ಸೇರಬೇಕು ಎಂದು ವರದಿ ನೀಡಿತ್ತು. ಮಹಾರಾಷ್ಟ್ರ ಸರ್ಕಾರ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ. ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ತೀರ್ಪು ಬಾಕಿ ಇದೆ. ಕಾನೂನು ರೀತ್ಯ ಬೆಳಗಾವಿ ಪಡೆಯಲು ವಿಫಲವಾಗಿರುವ ಮಹಾರಾಷ್ಟ್ರ ಸರ್ಕಾರವು ಎಂಇಎಸ್, ಶಿವಸೇನೆ ಸಂಘಟನೆಗಳ ಮೂಲಕ ವಾಮಮಾರ್ಗ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

‘ಮಹಾರಾಷ್ಟ್ರದ ರಾಜಕಾರಿಣಿಗಳು ಎಂಇಎಸ್, ಶಿವಸೇನೆ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುತ್ತಿವೆ. ಅಶಾಂತಿಯ ವಾತಾವರಣ ಸೃಷ್ಟಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕನ್ನಡ ಧ್ವಜ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಅಂತಹ ಧ್ವಜಕ್ಕೆ ಎಂಇಎಸ್, ಶಿವಸೇನೆ ಸಂಘಟನೆಗಳ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ್ದಾರೆ. ಜಗಜ್ಯೋತಿ ಬಸವಣ್ಣನ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಅದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.

ರಾಜ್ಯ ಸರ್ಕಾರವು ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕು. ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ವೇದಿಕೆ ಜಿಲ್ಲಾಘಟಕದ ಮುಖಂಡರಾದ ಓಂಕಾರಸ್ವಾಮಿ, ಮಧುಸೂದನ್, ಹಾಲೇಶ್, ಹುಣಸೇಮಕ್ಕಿ ಲಕ್ಷ್ಮಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು