ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ನಷ್ಟಕ್ಕೆ ಆಡಳಿತ ಮಂಡಳಿಯೇ ಕಾರಣ’

ಕೊಪ್ಪದ ‘ಸಹಕಾರ ಸಾರಿಗೆ ಸಂಸ್ಥೆ ಉಳಿಸಿ’ ಆಂದೋಲನದಲ್ಲಿ ಆರೋಪ
Last Updated 2 ಮಾರ್ಚ್ 2021, 5:08 IST
ಅಕ್ಷರ ಗಾತ್ರ

ಕೊಪ್ಪ: ‘ಸಹಕಾರ ಸಾರಿಗೆ ಸಂಸ್ಥೆಯು ನೌಕರರ ಸಮಸ್ಯೆ ಬಗೆಹರಿಸಲು ವಿಫಲವಾಗಿದ್ದು, ಆಡಳಿತ ಮಂಡಳಿ ರಾಜೀನಾಮೆ ಸಲ್ಲಿಸಬೇಕು’ ಎಂದು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್ ಪೋರ್ಟ್ ಮತ್ತು ಮಜ್ದೂರ್ ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ ಒತ್ತಾಯಿಸಿದರು.

ಷೇರುದಾರರು ಮತ್ತು ನೌಕರರು ಇಲ್ಲಿನ ಸಹಕಾರ ಸಾರಿಗೆ ಕಚೇರಿ ಎದುರು ಸೋಮವಾರ ಆಯೋಜಿಸಿದ್ದ ‘ಸಹಕಾರ ಸಾರಿಗೆ ಸಂಸ್ಥೆಯನ್ನು ಉಳಿಸಿ’ ಆಂದೋಲನದಲ್ಲಿ ಅವರು ಮಾತನಾಡಿ, ‘ನೌಕರರ ಲೆಕ್ಕಾಚಾರ ಕೂಡಲೇ ಮಾಡಬೇಕು. ಭವಿಷ್ಯ ನಿಧಿ ಹಣವನ್ನು ಪಾವತಿಸಬೇಕು, ಇಲ್ಲದಿದ್ದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಬೇಕು’ ಎಂದರು.

‘ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಲು ಕಾರಣವಾದ ಆಡಳಿತ ಮಂಡಳಿಯನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘30 ವರ್ಷಗಳ ಹಿಂದೆ ಸಹಕಾರ ಸಾರಿಗೆ ಸಂಸ್ಥೆ ಹುಟ್ಟಿಗಾಗಿ ಹೋರಾಟ ಮಾಡಲಾಗಿತ್ತು. ಇದೀಗ ಅದೇ ಸಂಸ್ಥೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಾಗಿ ಬಂದಿರುವುದು ವಿಪರ್ಯಾಸ ಸಂಗತಿ’ ಎಂದರು.

ಕಾರ್ಮಿಕರು, ನೌಕರರು ಸಹಕಾರ ಸಾರಿಗೆ ಸಂಸ್ಥೆ ಕಚೇರಿ ಎದುರು ಹಮ್ಮಿ ಕೊಂಡ ಪ್ರತಿಭಟನೆ ಅಂಗವಾಗಿ ಪಟ್ಟಣದ ಪುರಭವನದಿಂದ ಮೆರವಣಿಗೆ ಹೊರಟು, ಬಸ್ ನಿಲ್ದಾಣದ ಮೂಲಕ ಸಾಗಿ ಸಂಸ್ಥೆ ಕಚೇರಿ ಎದುರು ಜಮಾಯಿ ಸಿದರು. ಈ ಸಂದರ್ಭ ಸಂಸ್ಥೆ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ, ಆರ್ಥಿಕ ಸಂಕಷ್ಟಕ್ಕೆ ಕಾರಣ ವಾದ ಆಡಳಿತ ಮಂಡಳಿಯನ್ನು ತನಿಖೆಗೆ ಒಳ ಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಇಲಾಖೆಯೂ ನಿರ್ಲಕ್ಷ್ಯ: ‘ಬಸ್ ಕಾರ್ಮಿಕರಿಗೆ ಸರ್ಕಾರ 2017ರಲ್ಲಿ ನಿಗದಿಪಡಿಸಿದ ಕನಿಷ್ಠ ವೇತನ ₹ 11,545 ಆಗಿದ್ದರೂ ಸಂಸ್ಥೆ ₹ 6,160 ನೀಡುತ್ತಿತ್ತು. ಕನಿಷ್ಠ ವೇತನವೂ ಸಿಗುತ್ತಿರಲಿಲ್ಲ. ಬೋನಸ್ ಹಾಗೂ ಆರೋಗ್ಯ ಭತ್ಯೆ ಸಿಕ್ಕಿಲ್ಲ, ಪಿಎಫ್ ಹಣ ಕಟ್ಟಿಲ್ಲ. ಕಾರ್ಮಿಕ ಇಲಾಖೆ ಕೂಡ ನಿರ್ಲಕ್ಷ್ಯ ವಹಿಸಿದೆ. ಪ್ರತಿಯೊಬ್ಬ ಕಾರ್ಮಿಕನಿಗೆ ಕನಿಷ್ಠವೆಂದರೂ ₹ 5 ಲಕ್ಷ ಬರಬೇಕಿದೆ. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಸಂಸ್ಥೆ ಬಸ್ ಸೇವೆ ಸ್ಥಗಿತಗೊಳಿಸಿದ ನಂತರ ದಿನಗೂಲಿಗೆ ತೋಟದ ಕೆಲಸಕ್ಕೆ ಹೋಗುತ್ತಿದ್ದೆ’ ಎಂದು ಸಹಕಾರ ಸಾರಿಗೆ ಸಂಸ್ಥೆ ಕಾರ್ಮಿಕ ಸಿ.ಬಿ.ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT