ಸಾರ್ವಜನಿಕ ಬಳಕೆಗೆ ವಿವಿಧ ಸೇವೆ ಲಭ್ಯ

4
‘ಕರ್ನಾಟಕ ರಾಜ್ಯ ಪೊಲೀಸ್‌’ (KSP) ಆ್ಯಫ್‌

ಸಾರ್ವಜನಿಕ ಬಳಕೆಗೆ ವಿವಿಧ ಸೇವೆ ಲಭ್ಯ

Published:
Updated:
ನಿತಿನ್‌ ಕಾಮತ್‌

ಚಿಕ್ಕಮಗಳೂರು: ಕೆಪ್ಯುಲಸ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ‘ಕರ್ನಾಟಕ ರಾಜ್ಯ ಪೊಲೀಸ್‌’ (KSP) ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಷನ್‌ನಲ್ಲಿ ವಿವಿಧ ಸೇವೆಗಳು ಲಭ್ಯ ಇವೆ’ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್‌ ಕಾಮತ್‌ ಇಲ್ಲಿ ಗುರುವಾರ ತಿಳಿಸಿದರು.

ಜೂನ್‌ 22ರಂದು ಆ್ಯಪ್‌ ಬಿಡುಗಡೆಗೊಳಿಸಲಾಗಿದ್ದು, ರಾಜ್ಯದ ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಈ ಅಪ್ಲಿಕೇಷನ್‌ ಸೇವೆ ಲಭ್ಯ ಇದೆ. ರಾಜ್ಯದ ಎಲ್ಲ ಪೊಲೀಸ್‌ ನಿಯಂತ್ರಣ ಕೊಠಡಿಗಳಲ್ಲಿ (ಕಂಟ್ರೋಲ್‌ ರೂಂ) ಸಾಫ್ಟ್‌ವೇರ್‌ ಕಾರ್ಯನಿರತವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಪ್ಲಿಕೇಷನ್‌ ಹಲವು ಆಯ್ಕೆಗಳನ್ನು ಒಳಗೊಂಡಿದೆ. ‘ಘಟನೆ ವರದಿ ಮಾಡಿ’ ಈ ಆಯ್ಕೆಯು ಬಳಕೆದಾರರಿಗೆ ಯಾವುದೇ ಘಟನೆಗಳನ್ನು ವರದಿ ಮಾಡಲು ನೆರವಾಗುತ್ತದೆ. ಬಳಕೆದಾರರು ಸಾಕ್ಷ್ಯಾಧಾರ ಸಮೇತ ಫೋಟೊ, ವಿಡಿಯೋ ಅಪ್‌ಲೋಡ್‌ ಮಾಡಲು ಅವಕಾಶ ಇದೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಈ ಬಗ್ಗೆ ಎಸ್‌ಎಂಎಸ್‌ ರವಾನೆಯಾಗುತ್ತದೆ ಎಂದು ಕಾರ್ಯವಿಧಾನ ವಿವರಿಸಿದರು.

‘ಆರಕ್ಷಕ ಠಾಣೆಗಳು’ ಆಯ್ಕೆ ಮೂಲಕ ಬಳಕೆದಾರರು ರಾಜ್ಯದ ಪೊಲೀಸ್‌ ಠಾಣೆಗಳ ಮಾಹಿತಿ ಪಡೆಯಬಹುದಾಗಿದೆ. ‘ತುರ್ತು ಸಂಪರ್ಕಗಳು’ ಆಯ್ಕೆಯಲ್ಲಿ ಪೊಲೀಸ್‌, ಅಗ್ನಿಶಾಮಕದಳ, ಅಂಬುಲೆನ್ಸ್‌, ಮಕ್ಕಳ ಸಹಾಯವಾಣಿ, ಎಸಿಬಿ... ದೂರವಾಣಿ ಸಂಖ್ಯೆಗಳು ಲಭ್ಯ ಇವೆ. ‘ಎಫ್‌ಐಆರ್‌ ಶೋಧ’ ಆಯ್ಕೆಯಲ್ಲಿ ಎಫ್‌ಐಆರ್‌ ಸಂಖ್ಯೆ ನಮೂದಿಸಿ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ‘ಕಾಣೆಯಾದ ವ್ಯಕ್ತಿಗಳು’, ‘ಕಳುವಾದ ವಾಹನ ಶೋಧ’ ಆಯ್ಕೆಗಳು ಇವೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ಸೇವೆ ಲಭ್ಯ ಇದೆ. ಈ ಆ್ಯಪ್‌ ಮೂಲಕ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆಗಳನ್ನು ಒದಗಿಸಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.

2015ರಲ್ಲಿ ಮೊದಲ ಬಾರಿಗೆ ಆ್ಯಪ್‌ ಅನ್ನು ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿಗೊಳಿಸಲಾಯಿತು. ‘ckm police’ ಆ್ಯಪ್‌ ಹೆಸರಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ಇಲಾಖೆಯ ಆ್ಯಪ್‌ ಬಿಡುಗಡೆ ಮಾಡಲಾಗಿತ್ತು. ಬಳ್ಳಾರಿ, ತುಮಕೂರು ಜಿಲ್ಲೆಗಳವರು ಇದನ್ನು ಅಳವಡಿಸಿಕೊಂಡಿದ್ದರು. ಕೆಪ್ಯುಲಸ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಾಫ್ಟವೇರ್‌ ಕಂಪೆನಿಯು ಚಿಕ್ಕಮಗಳೂರನ್ನು ಕಾರ್ಯಕ್ಷೇತ್ರವಾಗಿಸಿಕೊಂಡಿದೆ. ಈಗ ಇತರೆಡೆಗಳಿಗೂ ವಿಸ್ತರಣೆಯಾಗಿದೆ ಎಂದರು.

‘ಸ್ಮಾರ್ಟ್‌ ಎಸ್ಟೇಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ’, ‘ಆಟೊಮೆಟಿಕ್‌ಫೇಸ್‌ ರೆಕಗ್ನಿಷನ್‌’, ‘ಫಿಂಗರ್‌ಪ್ರಿಂಟ್‌ ಐಡೆಂಟಿಫಿಕೇಷನ್‌ ಟೆಕ್ನಾಲಜಿ’, ‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌’ ಅಪ್ಲಿಕೇಷನ್‌ಗಳು ಇವೆ ಎಂದರು.

ಕಂಪೆನಿಯ ನಿತಿನ್‌ ಕಾಮತ್‌, ಕಿಶನ್‌ಗೌಡ, ಕೆ.ಆರ್‌.ಅರ್ಜುನ್‌, ಅವಿನಾಶ್‌ ಕುಮಾರ್‌, ಲಾವಣ್ಯ ಸದಾಶಿವ್‌, ಅನುರೂಪ್‌ ಸುರೇಶ್‌ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !