ಮಂಗಳವಾರ, ಏಪ್ರಿಲ್ 20, 2021
29 °C
ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾ ಸಮಿತಿ ಅಧ್ಯಕ್ಷ ರಾಜೇಶ್

ಗಿರಿಜನರ ಅಭಿವೃದ್ಧಿಗೆ ಒತ್ತು ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಗಿರಿಜನ ಕಲ್ಯಾಣ ಇಲಾಖೆ ಯಲ್ಲಿ ವಿವಿಧ ಸೌಲತ್ತುಗಳನ್ನು ವಿತರಿಸುವಾಗ ಪ್ರಸ್ತುತ 45 ವರ್ಷ ಮೇಲ್ಪಟ್ಟವರನ್ನು ಫಲಾನುಭವಿಗಳನ್ನಾಗಿ ಪರಿಗಣಿಸುತ್ತಿದ್ದು, ಇದರಿಂದ 45 ವರ್ಷದೊಳಗಿನವರು ಸೌಲಭ್ಯ ವಂಚಿತ ರಾಗುತ್ತಿದ್ದಾರೆ’ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾ ಸಮಿತಿ ಅಧ್ಯಕ್ಷ ರಾಜೇಶ್ ಎಂದರು.

ಬಾಳಗಡಿಯಲ್ಲಿನ ಲ್ಯಾಂಪ್ ಸಹಕಾರ ಸಂಘದ ಕಚೇರಿ ಸಭಾಂಗಣ ದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ 45 ವರ್ಷ ಮೇಲ್ಪಟ್ಟ 60 ವರ್ಷದೊಳಗಿನವರನ್ನು ಫಲಾನುಭವಿ ಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ. 45 ವರ್ಷದೊಳಗಿನವರಿಗೂ ಸೌಲಭ್ಯ ಸಿಗಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಹಕ್ಕಿಪಿಕ್ಕಿ, ಮಲೆಕುಡಿಯ, ಗೌಡಲು, ಹಸಲರು ಸೇರಿದಂತೆ ಹಲ ವಾರು ಜನಾಂಗ ಗಳು ವಾಸಿಸುತ್ತಿವೆ. ಎಲ್ಲಾ ಬುಡಕಟ್ಟು ಜನಾಂಗಗಳಿಗೂ ಮೂಲಸೌಲಭ್ಯ ಸಿಗುವಂತಾಗಬೇಕು, ಈ ಬಗ್ಗೆ ಜಿಲ್ಲಾಧಿಕಾ ರಿಗೆ ಮನವಿ ಸಲ್ಲಿಸಲಾಗುವುದು, ಸೌಲಭ್ಯ ಸಿಗದಿದ್ದರೆ ಹೋರಾಟ ಮಾಡಲಾಗುವುದು’ ಎಂದರು.

‘ಆಶ್ರಮ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ, ಇದರಿಂದ ಕ್ರಿಯಾಶೀಲ ಚಟುವಟಿಕೆಗಳಿಗೆ ತೊಂದರೆ ಯಾಗುತ್ತಿದೆ. ಕೊಪ್ಪದಲ್ಲಿ ಅಂಬೇಡ್ಕರ್ ವಸತಿ ಶಾಲೆ ತೆರೆಯಬೇಕು’ ಎಂದರು.

‘ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದವರಿಗೆ ಮನಸಿಗೆ ಬಂದಷ್ಟು ಭೂಮಿ ಮಂಜೂರು ಮಾಡಲಾಗುತ್ತಿದೆ. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಅರಣ್ಯ ಹಕ್ಕಿನಡಿ ಸಲ್ಲಿಸಿದ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿದ್ದು, ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಆದಿವಾಸಿ ಜನರು ವಾಸಿಸುವ ಪ್ರದೇಶಗಳಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹ ಮಾಡಲು ಅರಣ್ಯ ಇಲಾಖೆ ಅಡ್ಡಿಪಡಿಸಬಾರದು. ಕಿಸಾನ್ ಸಮ್ಮಾನ್ ಯೋಜನೆ ಅರಣ್ಯ ಹಕ್ಕು ವ್ಯಾಪ್ತಿಗೆ ಒಳಪಡುವವರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಆದಿವಾಸಿ ರಕ್ಷಣಾ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಮಾತನಾಡಿ, ‘ಗಿರಿಜನ ಇಲಾಖೆಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು. ಪ್ರಸ್ತುತ ವಾಲ್ಮೀಕಿ, ಗಿರಿಜನ ಅಭಿವೃದ್ಧಿ ಇಲಾಖೆ ಸೇರಿದಂತೆ ನಾಲ್ಕು ಕಡೆಗಳಿಗೆ ಒಬ್ಬ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ’ ಎಂದರು.

‘ಹಸಲು ಮತ್ತು ಗೌಡಲು ಜನಾಂಗಕ್ಕೆ ನೀಡುವ ಪೌಷ್ಟಿಕ ಆಹಾರದಂತೆಯೇ ಇತರೆ ಎಲ್ಲಾ ಹಿಂದುಳಿದ ಆದಿವಾಸಿ ಬುಡಕಟ್ಟು ಜನಾಂಗಗಳಿಗೂ ನೀಡಬೇಕು. ಆದಿವಾಸಿ ಗಿರಿಜನರು ವಾಸ ಮಾಡುವ ಗ್ರಾಮಗಳಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿ ಅವರ ಸಮಸ್ಯೆಯನ್ನು ಆಲಿಸಿ, ಪರಿಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಆದಿವಾಸಿ ರಕ್ಷಣಾ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಗೌಡ ಮಾತನಾಡಿ, ‘ಅರಣ್ಯ ಇಲಾಖೆಯ ಕೆಲವು ಕಾಯ್ದೆಗಳಿಂದಾಗಿ ಆದಿವಾಸಿ ಜನರ ಬದುಕನ್ನು ನಿರ್ಮಿಸಿಕೊಳ್ಳಲು ಅಡ್ಡಿಯುಂಟು ಮಾಡುತ್ತಿವೆ. ಇತ್ತ ಕಾಡಂಚನ್ನು ತ್ಯಜಿಸಿ ಜೀವನ ಸಾಗಿಸಲು ಪರಿಹಾರವೂ ದೊರಕದು’ ಎಂದರು.

ಆದಿವಾಸಿ ರಕ್ಷಣಾ ಪರಿಷತ್‌ನ ಉಪಾಧ್ಯಕ್ಷ ಕೆಂಪಣ್ಣ ಶಿರ್ಲು ಮಾತನಾಡಿ, ‘ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ, ನೆಮ್ಮಾರು, ಕೊಪ್ಪ ತಾಲ್ಲೂಕಿನ ಎಡಗುಂದ, ಮೆಣಸಿನ ಹಾಡ್ಯ ಭಾಗಗಳಲ್ಲಿ ಗೌಡಲು ಗಿರಿಜನ ಹೆಚ್ಚಿದ್ದಾರೆ. ಆ ಭಾಗದಲ್ಲಿ ಅಧಿಕಾರಿಗಳು ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರ, ಉಪಾಧ್ಯಕ್ಷ ಮಹೇಶ, ಸಹ ಕಾರ್ಯದರ್ಶಿ ಕೃಷ್ಣಪ್ಪ ಕಳಸ, ಸಂಘಟನಾ ಸುಂದರ್ ಕುಮಾರ್, ಜಯರಾಮ ದಬುಗುಣಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು