ಬುಧವಾರ, ಆಗಸ್ಟ್ 4, 2021
22 °C
ಅಂಗಡಿಗಳು ಬಂದ್‌; ಜನ–ವಾಹನ ಸಂಚಾರ ವಿರಳ

ಲಾಕ್‌ಡೌನ್‌ಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕೋವಿಡ್‌–19 ಸೋಂಕು ನಿಯಂತ್ರಣಕ್ಕಾಗಿ ಭಾನುವಾರ ಜಾರಿಗೊಳಿಸಿದ್ದ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಂಗಡಿ, ಮಾರುಕಟ್ಟೆಗಳು ಮುಚ್ಚಿದ್ದವು, ಜನ–ವಾಹನ ಸಂಚಾರ ವಿರಳವಾಗಿತ್ತು, ಕಾಫಿನಾಡು ಸ್ತಬ್ಧವಾಗಿತ್ತು.

ವ್ಯಾಪಾರ, ವಹಿವಾಟು ಸಹಿತ ವಿವಿಧ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಜನರು ಮನೆಯಲ್ಲಿದ್ದು ದಿನ ಕಳೆದರು.

ಔಷಧ, ದಿನಸಿ, ಹಾಲು, ತರಕಾರಿ, ಮಾಂಸ ಅಂಗಡಿ ಇತರ ಅಗತ್ಯ ವಸ್ತು, ಸೇವೆಗಳ ಮಳಿಗೆಗಗಳು ತೆರೆದಿದ್ದವು. ಈ ಅಂಗಡಿಗಳಲ್ಲೂ ಗ್ರಾಹಕರ ಒಬ್ಬರಿಬ್ಬರಿದ್ದದ್ದು ಕಂಡುಬಂತು. ಆಸ್ಪತ್ರೆಗಳು ತೆರೆದಿದ್ದವು.

ಬೆರಳೆಣಿಕೆಯಷ್ಟು ಕ್ಯಾಂಟೀನ್‌, ಹೋಟೆಲ್‌ಗಳು ತೆರೆದಿದ್ದವು. ಕೆಲವರು ಹೋಟೆಲ್‌ನಿಂದ ಆಹಾರ ಪಾರ್ಸ್‌ಲ್‌ ಒಯ್ದರು.

ರಸ್ತೆಗಳು ಖಾಲಿಖಾಲಿ: ನಗರದ ಐಜಿ ರಸ್ತೆ, ಎಂಜಿ ರಸ್ತೆ, ಆರ್‌ ರಸ್ತೆ, ಮಾರುಕಟ್ಟೆ ರಸ್ತೆ, ಕೆ.ಎಂ ರಸ್ತೆ ಸಹಿತ ಎಲ್ಲ ರಸ್ತೆಗಳು ಖಾಲಿಖಾಲಿ ಕಂಡುಬಂದವು. ರಸ್ತೆಗಳಲ್ಲಿ ಜನ–ವಾಹನಗಳ ಅಬ್ಬರ ಇರಲಿಲ್ಲ.

ಅಂಗಡಿಗಳು, ಮುಂಗಟ್ಟುಗಳು ಮುಚ್ಚಿದ್ದವು. ರಸ್ತೆಯಲ್ಲಿ, ಅಂಗಡಿಗಳ ಮುಂದೆ ಬೀದಿನಾಯಿಗಳು, ಜಾನವಾರುಗಳು ಓಡಾಡುವುದು, ಪವಡಿಸಿದ್ದು ಕಂಡುಬಂತು. ಕೆಎಸ್‌ಆರ್‌ಟಿಸಿ ನಿಲ್ದಾಣ, ಆಟೊ ನಿಲ್ದಾಣದ ಎಲ್ಲವೂ ಬಿಕೋ ಎನ್ನುತ್ತಿದ್ದವು.

ತಳ್ಳುಗಾಡಿಗಳವರು ಕೆಲವೆಡೆ ತರಕಾರಿ, ಹಣ್ಣು ಮಾರಾಟ ಮಾಡಿದರು.

ಹೊರಬರದ ಜನ: ಜನರು ದಿನಪೂರ್ತಿ ಮನೆಯಲ್ಲೇ ಕಾಲ ಕಳೆದರು. ಟಿ.ವಿ ವೀಕ್ಷಣೆ, ಒಳಾಂಗಣ ಆಟ, ಮೊಬೈಲ್‌ ಗೇಮ್‌ ಮೊದಲಾದವುಗಳಲ್ಲಿ ತಲ್ಲೀನರಾಗಿದ್ದರು.

ಮಕ್ಕಳು ಮನೆಯೊಳಗೆ, ಹಜಾರದಲ್ಲಿ ಆಟ ಆಡಿಕೊಳ್ಳುವುದು ಕಂಡುಬಂತು. ಪೋಷಕರು ಮಕ್ಕಳಿಗೆ ಸಾಥ್‌ ನೀಡಿದರು.

‘ಕೊರೊನಾ ವೈರಸ್‌ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ಅಕ್ಕಪಕ್ಕದ ಬಡಾವಣೆಗಳಲ್ಲೂ ಒಬ್ಬಿಬ್ಬರಿಗೆ ಪತ್ತೆಯಾಗಿದೆ. ಈ ವೈರಸ್‌ ತಲ್ಲಣ ಜನರಿಗೆ ಸ್ವಲ್ಪ ತಿಳಿದಿದೆ. ಇದರಿಂದ ದೂರ ಇರಬೇಕೆಂದರೆ ಮನೆಯಲ್ಲಿ ಇರುವುದು ಅನಿವಾರ್ಯ. ಭಾನುವಾರ ಕೆಲಸಕ್ಕೆ ರಜೆ ಇರುತ್ತದೆ. ಜನ ಮನೆಯಲ್ಲೇ ಇದ್ದು, ಕಾಲ ಕಳೆಯುತ್ತಾರೆ’ ಎಂದು ಮೆಡಿಕಲ್‌ ಸ್ಟೋರ್‌ಗೆ ಬಂದಿದ್ದ ವಿಜಯಪುರ ನಿವಾಸಿ ಸವಿತಾ ಹೇಳಿದರು.

ಪೊಲೀಸ್‌ ನಿಗಾ: ನಗರದ ಹನುಮಂತಪ್ಪ ವೃತ್ತ, ಡಿಎಸಿಜಿ ಪಾಲಿಟೆಕ್ನಿಕ್‌ ವೃತ್ತ, ಕೆಎಸ್‌ಆರ್‌ಟಿಸಿ ನಿಲ್ದಾಣದ, ಬೊಳರಾಮೇಶ್ವರ ದೇಗುಲ ವೃತ್ತ ಪ್ರಮುಖ ವೃತ್ತಗಳು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಇದ್ದರು.

ನಗರದ ವಿವಿಧ ಬಡಾವಣೆಗಳಲ್ಲಿ ವಾಹನಗಳಲ್ಲಿ ಪೊಲೀಸರು ಗಸ್ತು ತಿರುಗಿದರು. ಅನಗತ್ಯವಾಗಿ ವಾಹನಗಳಲ್ಲಿ ತಿರುಗುತ್ತಿದ್ದವರನ್ನು ಮನೆಗಳಿಗೆ ವಾಪಸ್‌ ಕಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು