ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮದಾನ; ಕಸ ಸಂಗ್ರಹ

ಗಿರಿ ಶ್ರೇಣಿ ಸ್ವಚ್ಛತಾ ಅಭಿಯಾನ– ನೈರ್ಮಲ್ಯ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ
Last Updated 21 ಫೆಬ್ರುವರಿ 2021, 16:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ನಗರಸಭೆ, ವಿವಿಧ ಸಂಘಸಂಸ್ಥೆಗಳ ವತಿಯಿಂದ ಭಾನುವಾರ ತಾಲ್ಲೂಕಿನ ಗಿರಿ ಶ್ರೇಣಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ನೂರಾರು ಮಂದಿ ಶ್ರಮದಾನ ಮಾಡಿ ಪ್ಲಾಸ್ಟಿಕ್‌, ಬಾಟಲಿ, ಪೊಟ್ಟಣ, ಚಿಂದಿ ಬಟ್ಟೆ, ಕಸಕಡ್ಡಿ ಹೆಕ್ಕಿದರು.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ, ಬಾಬಾಬುಡನ್‌ಗಿರಿ, ಗಾಳಿಕೆರೆ, ಮಾಣಿಕ್ಯಧಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. 12ತಂಡ ರಚಿಸಿಕೊಂಡು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮೋಡಕವಿದ ವಾತಾವರಣ, ತುಂತುರು ಮಳೆ, ಬೆಳಗಿನ ಚಳಿ, ಮಂಜು ಯಾವುದನ್ನು ಲೆಕ್ಕಿಸದೆ ಸ್ವಯಂ ಸೇವಕರು ಕಾರ್ಯಪ್ರವೃತರಾದರು.

ಗಿರಿಶ್ರೇಣಿ ಮಾರ್ಗದ ಇಕ್ಕೆಲದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಲೋಟ, ತಟ್ಟೆ, ಪೊಟ್ಟಣ, ಬಾಟಲಿಗಳು, ಚಿಂದಿ ಬಟ್ಟೆಗಳನ್ನು ಸಂಗ್ರಹಿಸಿದರು. ‌ಐದು ಗಂಟೆ ಶ್ರಮದಾನ ಮಾಡಿದರು.

ಗುಲಾಬಿ ಹೂ ನೀಡಿ ಜಾಗೃತಿ: ನಗರಸಭೆ ಆಯುಕ್ತ ಬಸವರಾಜ್ ಅವರು ಬಾಬಾಬುಡನ್‌ ಗಿರಿ ಪ್ರದೇಶದಲ್ಲಿನ ಅಂಗಡಿಗಳವರಿಗೆ ಗುಲಾಬಿ ಹೂ ನೀಡಿದರು. ಪ್ಲಾಸ್ಟಿಕ್, ಇತರ ಕಸಕಡ್ಡಿವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಸದ ತೊಟ್ಟಿಗೆ ಹಾಕಬೇಕು. ತಪ್ಪಿದರೆ ವ್ಯಾಪಾರವನ್ನು ಸಹ ನಿರ್ಬಂಧಕ್ಕೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗಿರಿಗೆ ಬಂದಿದ್ದ ಪ್ರವಾಸಿಗರಿಗೂ ಹೂ ನೀಡಿ, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಲಾಯಿತು.

‘ಸ್ವಚ್ಛತೆ–ಜಾಗೃತಿ ಕೈಂಕರ್ಯ’

ನಗರದ ಡಿಎಸಿಜಿ ಪಾಲಿಟೆಕ್ನಿಕ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರು ಬೆಳಿಗ್ಗೆ 7ಗಂಟೆಗೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಗಿರಿ ಶ್ರೇಣಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರಕೃತಿ ಸೊಬಗನ್ನು ಕಾಪಾಡಿಕೊಂಡು ಉಳಿಸುವ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ನಗರಸಭೆ ಪೌರಾಯುಕ್ತ ಎಂ.ಸಿ.ಬಸವರಾಜ್ ಮಾತನಾಡಿ, ಎಲ್ಲೆಂದರಲ್ಲಿ ಕಸ ಬಿಸಾಡುವುದಕ್ಕೆ ಕಡಿವಾಣ ಹಾಕಬೇಕು. ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ. ತಿಂಗಳಿಗೊಮ್ಮೆ ಸ್ವಚ್ಛತಾ ಅಭಿಯಾನ ಆಯೋಜಿಸುವ ಉದ್ದೇಶ ಇದೆ ಎಂದರು.

ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌.ಜಗನ್ನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT