ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕು ಪರವಾನಗಿ ನವೀಕರಣ; ಮಧ್ಯವರ್ತಿಯೇ ‘ದಿಕ್ಕು’

Last Updated 30 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಂದೂಕು ಪರವಾನಗಿ ನವೀಕರಣಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಅಲೆಯಬೇಕಿರುವುದು, ನಿಧಾನಗತಿ ಪ್ರಕ್ರಿಯೆ ಕಾರಣಗಳಿಂದಾಗಿ ಮಧ್ಯವರ್ತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ನವೀಕರಣ ಶುಲ್ಕ, ವಿಳಂಬ ದಂಡವೂ ದುಬಾರಿ ಎಂಬುದು ಪರವಾನಗಿದಾರರ ಅಳಲು.

ಜಿಲ್ಲಾಡಳಿತದ ಅಂಕಿಅಂಶ ಪ್ರಕಾರ ಜಿಲ್ಲೆಯಲ್ಲಿ 12,028 ಪರವಾನಗಿ ಬಂದೂಕುಗಳು (ಎಸ್‌ಬಿಬಿಎಲ್‌ (ಸಿಂಗಲ್‌ ಬ್ಯಾರಲ್‌ ಬುಲೆಟ್‌ ಲೋಡಿಂಗ್‌), ಡಿಬಿಬಿಎಲ್‌ (ಡಬಲ್‌ ಬ್ಯಾರಲ್‌ ಬುಲೆಟ್‌ ಲೋಡಿಂಗ್‌), ಡಿಬಿಎಂಎಲ್‌, ಎಸ್‌ಬಿಎಂಲ್‌, ಪಿಸ್ತೂಲು, ರೈಫಲ್‌...) ಇವೆ. 2016ರ ಶಸ್ತ್ರಾಸ್ತ್ರ ಕಾಯ್ದೆಯಂತೆ ಬಂದೂಕು ಪರವಾನಗಿ ನವೀಕರಣವನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.

ಪರವಾನಗಿದಾರರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿ, ದಾಖಲೆ ಸಲ್ಲಿಸಿ ನವೀಕರಿಸಿಕೊಳ್ಳಬೇಕು.
ಪ್ರಕಿಯೆಗೆ ಎರಡ್ಮೂರು ಬಾರಿ ಅಲೆಸುತ್ತಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಕಾಯಬೇಕು. ಸಿಬ್ಬಂದಿ ಸಬೂಬು ನೀಡಿ ವಿಳಂಬ ಮಾಡುತ್ತಾರೆ. ಕೆಲಸ ಮಾಡಿಸುವುದೇ ಸಾಹಸ ಎಂಬುದು ಪರವಾನಗಿದಾರರ ದೂರು.
‘ಫಸಲು, ಆತ್ಮ ರಕ್ಷಣೆಗೆ ಪೂರ್ವಿಕರ ಕಾಲದಿಂದಲೂ ಬಂದೂಕು ಇಟ್ಟುಕೊಂಡಿದ್ದೇವೆ. ಈ ಹಿಂದೆ ತಹಶೀಲ್ದಾರ್‌ ಅವರಿಗೆ ಪರವಾನಗಿ ನವೀಕರಣಕ್ಕೆ ಅವಕಾಶ ಇತ್ತು. ಜಿಲ್ಲಾ ಕೇಂದ್ರದಲ್ಲೇ ಪಡೆಯಬೇಕು ಎಂದು ನಿಯಮ ಮಾಡಿರುವುದು ಸರಿಯಲ್ಲ. ದೂರದ ಊರುಗಳುವರು ಕಾಯುವ, ಅಲೆಯುವ ‘ಶಿಕ್ಷೆ’ ಅನುವಭವಿಸುವಂತಾಗಿದೆ’ ಎಂದು ಎನ್‌.ಆರ್‌.ಪುರ ತಾಲ್ಲೂಕಿನ ಲಿಂಗಾಪುರದ ಎಸ್‌.ಸುನೀಲ್‌ ಸಂಕಷ್ಟ ತೋಡಿಕೊಂಡರು.

‘ಮಧ್ಯವರ್ತಿಗಳನ್ನು ಅವಲಂಬಿಸದೇ ವಿಧಿ ಇಲ್ಲ. ಮಧ್ಯವರ್ತಿಗಳು ‘ಪಟ್ಟು’ಗಳನ್ನು ಚಲಾಯಿಸಿ ಸುಲಭವಾಗಿ ಕೆಲಸ ಮಾಡಿಸುತ್ತಾರೆ. ಈ ಹಿಂದೆ ಶುಲ್ಕ ಕಡಿಮೆ ಇತ್ತು. 2016ರ ಕಾಯ್ದೆಯಡಿ ದುಬಾರಿ ಶುಲ್ಕ, ದಂಡ ವಿಧಿಸಲಾಗಿದೆ. ನವೀಕರಣ ಒಂದು ದಿನ ತಡವಾದರೂ ಎರಡು ಸಾವಿರ ದಂಡ ತೆರಬೇಕು’ ಎಂದು ಅವರು ಅಳಲು ತೋಡಿಕೊಂಡರು.

ಬಂದೂಕು ನವೀಕರಣಕ್ಕೆ 2003ರಲ್ಲಿ ₹ 60 ಶುಲ್ಕ ಇತ್ತು. 2016ರ ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ನವೀಕರಣ ಶುಲ್ಕ ₹ 1,500 ಹಾಗೂ ವಿಳಂಬಕ್ಕೆ ದಂಡ ₹ 2000 ನಿಗದಿಪಡಿಸಲಾಗಿದೆ. ಇದು ಕೆಲ ಪರವಾನಗಿದಾರರಿಗೆ ನುಂಗಲಾರದ ತುತ್ತಾಗಿದೆ.

‘ಈ ಹಿಂದೆ ಇದ್ದಂತೆ ಪರವಾನಗಿ ನವೀಕರಣವನ್ನು ತಹಶೀಲ್ದಾರ್‌ ವ್ಯಾಪ್ತಿಗೆ ನೀಡಬೇಕು. ಶುಲ್ಕ, ದಂಡವನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಕಾಯ್ದೆ ಮಾರ್ಪಡಿಸಲು ಸರ್ಕಾರ ಕ್ರಮ ವಹಿಸಬೇಕು. ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು’ ಎಂದು ಎನ್‌.ಆರ್‌.ಪುರ ತಾಲ್ಲೂಕಿನ ಕುಣಗ ಗ್ರಾಮದ ಬಸವರಾಜಪ್ಪ ಮನವಿ ಮಾಡಿದರು.

‘ವಿಳಂಬ ಮಾಡುತ್ತಿಲ್ಲ’

‘ಪರವಾನಗಿ ನವೀಕರಣ ಪ್ರಕ್ರಿಯೆಯಲ್ಲಿ ವಿಳಂಬ ಮಾಡುತ್ತಿಲ್ಲ. ಸಕಾಲದಲ್ಲಿ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಪ್ರತಿಕ್ರಿಯಿಸಿದರು.

‘ಮಧ್ಯವರ್ತಿಗಳನ್ನು ಗುರುತಿಸುವುದು ಸ್ವಲ್ಪಕಷ್ಟ. ಹಾವಳಿ ಇದ್ದರೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT