ಬುಧವಾರ, ಅಕ್ಟೋಬರ್ 21, 2020
22 °C

ಪೂರ್ವಗ್ರಹಪೀಡಿತ ವರದಿ, ಸಮೀಕ್ಷೆ ನಾಟಕ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಜಸ್ಟೀಸ್‌ ನಾಗಮೋಹನ ದಾಸ್‌ ಅಲ್ಲ, ಅವರು ಇನ್‌ಜಸ್ಟೀಸ್‌ ನಾಗಮೋಹನ ದಾಸ್‌. ಅವರು ಪೂರ್ವಗ್ರಹಪೀಡಿತರಾಗಿ ವರದಿ ತಯಾರಿ ಮಾಡಿಕೊಂಡು ಸಮೀಕ್ಷೆಗೆ ಹೋದವರು, ಸತ್ಯಶೋಧನೆಗೆ ಹೋದವರಲ್ಲ’ ಎಂದು ಸಚಿವ ಸಿ.ಟಿ. ರವಿ ಕಟಕಿಯಾಡಿದರು.

ಡಿ.ಜೆ.ಹಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ‘ನಾವು ಭಾರತೀಯರು ಸಂಘಟನೆ’ ಸಿದ್ಧಪಡಿಸಿದ ಸತ್ಯಶೋಧನಾ ವರದಿಯನ್ನು ನ್ಯಾ.ನಾಗಮೋಹನ ದಾಸ್‌ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಸತ್ಯಶೋಧನಾ ಸಮಿತಿಯಲ್ಲ. ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟ ಷಡ್ಯಂತ್ರದ ಸಮಿತಿ’ ಎಂದು ಟೀಕಿಸಿದರು.

‘ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಬಂದಾಕ್ಷಣ ಊರಿಗೆ ಬೆಂಕಿ ಹಾಕುವುದನ್ನು ನಾಗಮೋಹನ ದಾಸ್‌ ಸಮಿತಿ ಒಪ್ಪಿಕೊಳ್ಳುತ್ತಾ? ನವೀನ್‌ ಪೋಸ್ಟ್‌ ಹಾಕಿದ ಅಂಥ ಹೇಳುತ್ತೀರಿ, ನವೀನ್‌ಗೆ ಬಂದಿದ್ದ ಪೋಸ್ಟ್‌ನಲ್ಲಿ ರಾಮ, ಕೃಷ್ಣನ ಬಗ್ಗೆ ಹಾಕಿದ್ದ ಕಾಮೆಂಟ್‌ಗಳ ಬಗ್ಗೆ ಸತ್ಯಶೋಧನಾ ಸಮಿತಿ ಯಾಕೆ ಕಣ್ಣುಮುಚ್ಚಿ ಕುಳಿತಿದೆ? ಅಂದರೆ, ಉಳಿದವರು ಹಿಂದೂ ಧರ್ಮವನ್ನು ಅಪಮಾನಿಸಿದರೆ ನಾಗಮೋಹನ ದಾಸ್‌ ಅಂಥವರಿಗೆ ಏನೂ ಅನ್ನಿಸುವುದಿಲ್ಲ. ಕಮ್ಯುನಿಸ್ಟ್‌ ಅಜೆಂಡಾ, ಒಡಕಿನ ಬೀಜ ಬಿತ್ತಲು ಕೆಲವರನ್ನು ಈ ರೀತಿ ಮುಂಚೂಣಿಯಲ್ಲಿ ಇಟ್ಟುಕೊಂಡಿರುತ್ತಾರೆ. ಆ ಪೈಕಿ ಇವರೂ ಒಬ್ಬರು’ ಎಂದು ಕುಟುಕಿದರು.

‘ನಾಗಮೋಹನ ದಾಸ್‌ ಅವರು ದತ್ತಪೀಠ ವಿಚಾರದಲ್ಲೂ ದ್ರೋಹ ಬಗೆದರು. ದತ್ತಪೀಠಕ್ಕೆ ಸಂಬಂಧಿಸಿದಂತೆ ನಮ್ಮವರು ನೀಡಿದ ದಾಖಲೆಗಳನ್ನು ಅವರು ಏನು ಮಾಡಿದರು? ಬಾಬಾಬುಡನ್‌ ದರ್ಗಾ ಹಾಗೂ ದತ್ತಾತ್ರೇಯ ಪೀಠ ಬೇರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ನ್ಯಾಯಮೂರ್ತಿ ಪದಕ್ಕೆ ಕಳಂಕ ಬರುವ ರೀತಿಯಲ್ಲಿ ವರದಿ ಕೊಟ್ಟರು’ ಎಂದು ಚುಚ್ಚಿದರು.

‘ಹಿಂದಿ ದಿವಸಕ್ಕೆ ವಿರೋಧ; ನಾಟಕವಲ್ಲವೇ?’
‘ಉರ್ದು ದಿವಸ ಆಚರಣೆಗೆ ಸ್ವತಃ ಸಿದ್ದರಾಮಯ್ಯ ಹೋಗಿ ಬರುತ್ತಾರೆ. ಆದರೆ, ಹಿಂದಿ ದಿವಸಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಇದು ನಾಟಕವಲ್ಲವೇ?’ ಎಂದು ಸಚಿವ ರವಿ ಪ್ರಶ್ನಿಸಿದರು.

‘ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿ ಕನ್ನಡದ ಕಗ್ಗೊಲೆ ಮಾಡಿದ ಟಿಪ್ಪು ಜಯಂತಿಯನ್ನು ವೈಭವೀಕರಿಸಿ ಆಚರಿಸುವಂಥ ಕಾಂಗ್ರೆಸ್‌ಗೆ ಕನ್ನಡದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಅವತ್ತು ಒಪ್ಪಿಕೊಂಡಿದ್ದ ಕಾಂಗ್ರೆಸ್‌ ಇವತ್ತು ಬಣ್ಣ ಬದಲಿಸುತ್ತಿರುವುದು ಗೋಸುಂಬೆತನ’ ಎಂದು ಕಿಡಿಕಾರಿದರು.

‘ಹೋರಾಟ, ಕನ್ನಡದ ಉಳಿವಿಗೋ? ಹಿಂದಿ ದ್ವೇಷಕ್ಕೋ? ಎಂಬುದನ್ನು ಹೋರಾಟಗಾರರು ಸ್ಪಷ್ಟಪಡಿಸಬೇಕು. ಹಿಂದಿ ವಿರೋಧಿಸುವವರು ಅಂಬೇಡ್ಕರ್‌ ಅವರನ್ನು ವಿರೋಧಿಸುತ್ತಾರೆ. ಸಂವಿಧಾನವನ್ನೂ ವಿರೋಧಿಸುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು