ಭಾನುವಾರ, ಮಾರ್ಚ್ 7, 2021
28 °C

ಐಸಿಯುನಲ್ಲಿ ರಾಜ್ಯ ಸರ್ಕಾರ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಳೆಹೊನ್ನೂರು: ‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್ ಮಾಡಿದ್ದರಿಂದ ಬಹುತೇಕ ಮಂದಿ ಮದ್ಯ ಸೇವನೆ ಬಿಟ್ಟಿದ್ದಾರೆ. ಆದರೆ, ಸರ್ಕಾರ ಮಾತ್ರ ಮದ್ಯದ ಆದಾಯ ಇಲ್ಲದೆ ಬದುಕುವ ಸ್ಥಿತಿಯಲ್ಲಿ ಇಲ್ಲದಂತಾಗಿರುವುದು ವಿಷಾದನೀಯ’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದ ವಿದ್ಯಾಗಣಪತಿ ಸಮುದಾಯಭವನದಲ್ಲಿ ಸೃಜನ್ ಟ್ರಸ್ಟ್ ವತಿಯಿಂದ ಬಾಳೆಹೊನ್ನೂರು, ಜಯಪುರ, ಮಾಗುಂಡಿ, ಅಲಗೇಶ್ವರ, ಕಡಬಗೆರ ಬಾಗದ ಸವಿತಾ ಸಮಾಜದ 85 ಜನರಿಗೆ ದಿನಸಿ ಹಾಗೂ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಕಿಟ್ ವಿತರಿಸಿ ಮಾತನಾಡಿದರು.

‘ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಐಸಿಯುನಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ಮದ್ಯದ ಅಂಗಡಿಗಳೇ ಜಾಸ್ತಿ ಆಗಿವೆ. ಈ ನಡುವೆ ಮತ್ತೆ ಹೊಸ ಅಂಗಡಿಗಳಿಗೆ ಪರವಾನಗಿ ನೀಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಬಿಜೆಪಿ ಸಿದ್ಧಾಂತಕ್ಕೆ ವಿರೋಧವಾಗಿದೆ’ ಎಂದರು.

‘ಮನಮೋಹನ ಸಿಂಗ್ ಪ್ರಧಾನಿಯಾದ ಸಂದರ್ಭದಲ್ಲಿ ಅಮದು ಮಾಡಿಕೊಳ್ಳುವ ವಿದೇಶಿ ತೈಲದ ಬೆಲೆಯ ಆಧಾರದಲ್ಲಿ ಇಲ್ಲಿನ ಪೆಟ್ರೋಲ್, ಡಿಸೇಲ್ ಬೆಲೆ ನಿರ್ಧಾರವಾಗುತ್ತಿತ್ತು. ಅಲ್ಲಿ ಏರಿಕೆಯಾದಲ್ಲಿ ಇಲ್ಲೂ ಏರಿಕೆಯಾಗುತ್ತಿತ್ತು. ಆದರೆ, ಇದೀಗ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಧಾರಣೆ ಏರುಮುಖದಲ್ಲೇ ಸಾಗಿದ್ದು, ಇಳಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಕೇಂದ್ರ ಸರ್ಕಾರ ದಿಢೀರನೇ ಡಿಸೇಲ್ ಹಾಗೂ ಪೆಟ್ರೋಲ್ ಮೇಲಿನ ಸುಂಕವನ್ನು ಏರಿಸುವ ಮೂಲಕ ಕೇಂದ್ರ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಅವರಿಗೆ ಸರ್ಕಾರ ನಡೆಸಲು ಬರುತ್ತಿಲ್ಲ. ಎಲ್ಲವನ್ನೂ ಜನತೆ ಗಮನಿಸುತ್ತಿದ್ದು, ಅವರೇ ತೀರ್ಮಾನಿಸಲಿದ್ದಾರೆ’ ಎಂದರು.

ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೂವಮ್ಮ, ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಸದಸ್ಯ ಮದುಸೂಧನ್, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಎಂ.ನಾಗೇಶ್, ಗೇರ್ ಬೈಲ್ ಪ್ರವೀಣ್, ಎಸ್.ಜೆ.ಜಯಶೀಲ, ಎಂ.ಎಸ್.ಜಯಪ್ರಕಾಶ್, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಂತೋಷ್ ಕುಮಾರ್, ಬಿ.ಎನ್.ಸೋಮೇಶ್, ಸುನಿಲ್ ರಾಜ್ ಭಂಡಾರಿ ಮೋಹನ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು