ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಾಗಲಿ: ಶಾಸಕ ಎಂ.ಪಿ. ಕುಮಾರಸ್ವಾಮಿ

Last Updated 18 ಡಿಸೆಂಬರ್ 2021, 5:45 IST
ಅಕ್ಷರ ಗಾತ್ರ

ಮೂಡಿಗೆರೆ: ‘ರೈತರಿಗೆ ಕೃಷಿಯಲ್ಲಿನ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ಷೇತ್ರೋತ್ಸವಗಳು ಸಹಕಾರಿ’ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹ್ಯಾಂಡ್‌ಪೋಸ್ಟ್ ನಲ್ಲಿರುವ ವಲಯ ಕೃಷಿ ಮತ್ತು ತೋಟ ಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ತಂತ್ರಜ್ಞಾನಗಳು ರೈತರಿಗೆ ಖರ್ಚನ್ನು ಕಡಿಮೆಗೊಳಿಸಿ ಆದಾಯ
ವನ್ನು ತಂದುಕೊಡುವಲ್ಲಿ ಯಶಸ್ವಿ ಯಾಗುತ್ತವೆ. ಆದರೆ, ಅವುಗಳ ಪರಿಚಯವಿರದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿ ವೈಜ್ಞಾನಿಕ ಮಾದರಿಯಲ್ಲಿ ಕೃಷಿ ನಡೆಸಲು ಕ್ಷೇತ್ರೋತ್ಸವಗಳು ನೆರವಾಗುತ್ತವೆ. ಕ್ಷೇತ್ರೋತ್ಸವದಲ್ಲಿ ಸಿಗುವ ಅನುಭವವನ್ನು ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. 2022 ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಯಾಗಿದ್ದು, ಅದನ್ನು ಸಕಾರಗೊಳಿಸಲು ಇಲಾಖೆಗಳು ಮುಂದಾಗಬೇಕು’ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಮಾತನಾಡಿ, ‘ರೈತರು ಹಾಗೂ ಕೃಷಿ ವಿಜ್ಞಾನಿಗಳ ನಡುವೆ ಮುಕ್ತ ಸಂವಾದಕ್ಕೆ ಕ್ಷೇತ್ರೋತ್ಸವ ನಡೆಸಲಾಗುತ್ತಿದೆ. ರೈತರು ತಾವು ಕೃಷಿ ಕ್ಷೇತ್ರದಲ್ಲಿ ಅನುಭವಿಸುವ ಸಮಸ್ಯೆಗಳನ್ನು ವಿಜ್ಞಾನಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಸಾಂಪ್ರದಾಯಿಕ ಕೃಷಿಯನ್ನು ಕೈಬಿಟ್ಟು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಮಾತನಾಡಿ, ‘ರೈತರ ಆದಾಯ ದ್ವಿಗುಣವಾಗಬೇಕಾದರೆ ಉಪ ಕಸುಬುಗಳನ್ನು ನಡೆಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳ ಸಮಗ್ರ ವಿಶ್ವವಿದ್ಯಾಲಯ ಜಾರಿಯಾಗಬೇಕು ಎಂಬುದು ಈಗಾಗಲೇ ಚರ್ಚೆಯಾಗಿದ್ದು, ಅದು ಜಾರಿಯಾದರೆ ಇನ್ನಷ್ಟು ಉಪಯುಕ್ತ ವಾಗುತ್ತದೆ’ ಎಂದರು.

ಕೃಷಿ ಪರಿಕರಗಳ ವಸ್ತು ಪ್ರದರ್ಶನ ನಡೆಸಲಾಯಿತು.

ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಹೇಮ್ಲಾನಾಯಕ್, ಡೀನ್ ನಾರಾಯಣ ಎಸ್ ಮಾವಲ್ಕಾರ್, ಬೆಳೆಗಾರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು, ರಾಜ್ಯ ರೈತ ಮಹಿಳಾ ಸಂಘದ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣ ಗೌಡ, ಡಾ.ಜೆ.ವೆಂಕಟೇಶ್, ರವೀಂದ್ರ ಬಾಳೆಗದ್ದೆ, ಮಹಮ್ಮದ್ ಜುಬೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT