ಶೆಟ್ಟಿಕೊಪ್ಪ(ಎನ್.ಆರ್.ಪುರ): ಅತಿವೃಷ್ಟಿಯಿಂದ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ₹100ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಜನತಾ ಕಾಲೊನಿ ಚನಮಣಿ ಸಂಪರ್ಕ ಸೇತುವೆ ಹಾಗೂ ಆಲಂದೂರು ಗ್ರಾಮದ ಸಂಪರ್ಕ ಸೇತುವೆಯನ್ನು ಮಂಗಳವಾರ ವೀಕ್ಷಿಸಿದ ನಂತರ ಅವರು ಮಾಹಿತಿ ನೀಡಿದರು.
ಆರೇಳು ವರ್ಷಗಳಿಂದ ಜಿಲ್ಲೆಯ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮಾಗುಂಡಿ ಹಾಗೂ ನರಸಿಂಹರಾಜಪುರ ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ತಾಲ್ಲೂಕಿನ ಕಟ್ಟಿನಮನೆ ಭಾಗದಲ್ಲಿ ಮರ ಬಿದ್ದು ಸಾವನ್ನಪ್ಪಿದವರಿಗೆ ಪರಿಹಾರ ವಿತರಿಸಲಾಗಿದೆ. ಮಳೆಯಿಂದ ಹಲವು ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ರಸ್ತೆಗಳು ಗುಂಡಿಬಿದ್ದಿವೆ. ಹಳ್ಳಗಳು ಉಕ್ಕಿಹರಿದ ಪರಿಣಾಮ ನಾಟಿ ಮಾಡಿದ್ದ ಗದ್ದೆಗಳಿಗೆ ಮಣ್ಣು ಮತ್ತು ಮರಳು ನುಗ್ಗಿ ಬೆಳೆ ಕೊಳೆತು ಹೋಗಿದೆ. ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ತೂಗು ಸೇತುವೆ, ಮನೆಗಳಿಗೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಈ ಹಿಂದೆ ಮಳೆಯಿಂದ ಹಾನಿಗೊಳಗಾಗಿದ್ದ ಕೊಗ್ರೆ ಸೇತುವೆ ನಿರ್ಮಿಸಲಾಗಿದೆ, ನೆರಲು ಕೂಡಿಗೆ ಶೃಂಗೇರಿ, ಬೇಗಾರು ಸಂಪರ್ಕ ಸೇತುವೆಯನ್ನು ₹4ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ. ರಸ್ತೆ ಗುಂಡಿ ಮುಚ್ಚಲಾಗಿದೆ ಎಂದರು.
ಅಧಿಕೃತ ದಾಖಲೆ ಇದ್ದು, ಮನೆ ಕಳೆದುಕೊಂಡವರಿಗೆ ₹1.20 ಲಕ್ಷ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ₹50 ಸಾವಿರ ಹಾಗೂ ಎಂಜಿನಿಯರ್ ನಿರ್ಧರಿಸಿದ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ. ಅನಧಿಕೃತ ಮನೆಗಳು ಹಾನಿಯಾಗಿದ್ದರೆ ₹1ಲಕ್ಷದವರೆಗೆ ಪರಿಹಾರ ವಿತರಿಸಲಾಗಿದೆ. ರೈತರಿಗೆ ಬೆಳೆವಿಮೆ ದೊರೆಯುವಲ್ಲಿ ಇದ್ದ ಸಮಸ್ಯೆಯನ್ನು ಬಗೆಹರಿಸಲಾಗಿದ್ದು ಬಹುತೇಕರಿಗೆ ವಿಮೆ ಬಂದಿದೆ ಎಂದರು.
ತಾಲ್ಲೂಕಿನ ಗದ್ದೆ ಮನೆಯಲ್ಲಿ ಹಾನಿಗೊಳಗಾದ ಸೇತುವೆ, ಮಡಬೂರು ಮುಖ್ಯರಸ್ತೆ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಕಡಹಿನಬೈಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ಚಂದ್ರಶೇಖರ್, ವಾಣಿನರೇಂದ್ರ, ಲಿಲ್ಲಿಮ್ಯಾಥ್ಯೂ.
ಮುಖಂಡರಾದ ಗೇರುಬೈಲು ನಟರಾಜ್, ಈ.ಸಿ.ಜೋಯಿ, ಉಪೇಂದ್ರ, ನರೇಂದ್ರ, ಸುಂದರೇಶ್, ಸದಾಶಿವ, ಎಸ್.ಡಿ.ರಾಜೇಂದ್ರ, ಮನು, ರವಿಶಂಕರ್, ಎ.ಬಿ.ಪ್ರಶಾಂತ್, ನಂದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.