ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ | ಡೆಂಗಿ: ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ

Published 14 ಜೂನ್ 2024, 14:23 IST
Last Updated 14 ಜೂನ್ 2024, 14:23 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಏರುತ್ತಿದೆ.

ಡೆಂಗಿ ಪ್ರಕರಣಗಳಿಗೆ ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ. ಡಾ. ಮಾನಸ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ತಿಂಗಳು 88 ಶಂಕಿತ ಪ್ರಕರಣಗಳಲ್ಲಿ 24 ಮಂದಿಗೆ  ಡೆಂಗಿ ದೃಢಪಟ್ಟಿದ್ದು ಚಿಕಿತ್ಸೆ ನೀಡಲಾಗಿದೆ. ಜೂನ್  12ರ ವರೆಗೆ 84 ಮಂದಿಗೆ  ಡೆಂಗಿ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 22 ಮಂದಿಗೆ ರೋಗ ದೃಢಪಟ್ಟಿದೆ.

ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಪ್ರತಿನಿತ್ಯ ಸರಾಸರಿ 150ಕ್ಕೂ ಹೆಚ್ಚು  ಮಂದಿ ಜ್ವರಕ್ಕೆ  ಚಿಕಿತ್ಸೆ ಬರುತ್ತಿದ್ದಾರೆ. ಗ್ರಾಮೀಣ ಭಾಗದ ರೋಗಿಗಳನ್ನು ತಾಲ್ಲೂಕು ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದೆ.

‘ಕಳೆದ ಬಾರಿಗಿಂತಲೂ ಈ ಬಾರಿ ಡೆಂಗಿ ಪ್ರಕರಣಗಳು ಹೆಚ್ಚಿವೆ. ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವ ಸರ್ವೆ ನಡೆಸಲು ಸ್ವಯಂ ಸೇವಕರ ನೆರವು ನಿರೀಕ್ಷಿಸಲಾಗಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ಅಥವಾ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಿದರೆ ಲಾರ್ವಾ  ಸರ್ವೆ ನಡೆಸಿ ಡೆಂಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಂದ್ರೇಶ್ ತಿಳಿಸಿದರು.

‘ಡೆಂಗಿ ಬಂದ ನಂತರ ಚಿಕಿತ್ಸೆಗೆ ದಾಖಲಾಗುವುದಕ್ಕಿಂತ  ಡೆಂಗಿ ಬಾರದಂತೆ ಹಾಗೂ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಡೆಂಗಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು’ ಎಂದು ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕಾ ಹೇಳಿದರು.

ಮೂಡಿಗೆರೆಯ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂಡು ಬಂದ ಜನಜಂಗುಳಿ
ಮೂಡಿಗೆರೆಯ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂಡು ಬಂದ ಜನಜಂಗುಳಿ

ಡೆಂಗಿ ಹರಡದಂತೆ ಮುಂಜಾಗ್ರತೆ ವಹಿಸಬೇಕು ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಸಲ್ಲದು ಡಾ. ಮಾನಸ ನೇತೃತ್ವದ ತಂಡ ನಿತ್ಯವೂ ಕಾರ್ಯಚರಣೆ

ಒಂದೇ ದಿನ 7 ಪ್ರಕರಣ

ಜೂ. 13 ರಂದು ಒಂದೇ ದಿನದಲ್ಲಿ ಎಂಜಿಎಂ ಆಸ್ಪತ್ರೆಯಲ್ಲಿ 14 ಮಂದಿಗೆ ಡೆಂಗಿ ಪರೀಕ್ಷೆ ನಡೆಸಲಾಗಿದ್ದು 7 ಮಂದಿಗೆ ಡೆಂಗಿ ಇರುವುದು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT