ಗುರುವಾರ , ಮೇ 19, 2022
23 °C
ಹಣಕಾಸಿನ ವಿಚಾರಕ್ಕೆ ಗಲಾಟೆ

ಧ್ರುವರಾಜ್‌ ಹತ್ಯೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಗವನಹಳ್ಳಿಯ ಯುವಕ ಧ್ರುವರಾಜ್‌ ಅರಸ್‌ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ವಸ್ತಾರೆಯ ಪ್ರಮೋದ್‌, ಅವರ ಸಹೋದರ ಪ್ರಜ್ವಲ್‌ ಬಂಧಿತರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಕೃತ್ಯಕ್ಕೆ ಹಣಕಾಸಿನ ವಿಚಾರದ ಗಲಾಟೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಪ್ರಮೋದ್‌ ಭದ್ರಾವತಿಯಲ್ಲಿ ಹಾಗೂ ಪ್ರಜ್ವಲ್‌ ವಸ್ತಾರೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇನ್ನು ಇಬ್ಬರು ಆರೋಪಿಗಳು ಪವನ್‌, ಲುಕಿತ್‌ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಕೋಟೆ ಬಡಾವಣೆಯ ನೀರಿನ ಟ್ಯಾಂಕ್‌ ಬಳಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಧ್ರುವರಾಜ್‌ ಅರಸ್‌ ಹೊಟ್ಟೆಗೆ ಚೂರಿಯಿಂದ ಇರಿದಿದ್ದರು. ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು, ಕೆಲಹೊತ್ತಿನಲ್ಲಿ ಮೃತಪಟ್ಟಿದ್ದರು.

‘ಸೋಮವಾರ ರಾತ್ರಿ 7.30ರ ಹೊತ್ತಿನಲ್ಲಿ ಕೋಟೆಯ ನೀರಿನ ಟ್ಯಾಂಕ್‌ ಪ್ರದೇಶದಲ್ಲಿ ಧ್ರುವರಾಜ್‌ ಅರಸ್‌ ಮತ್ತು ಪ್ರಮೋದ್‌ಗೆ ಗಲಾಟೆಯಾಯಿತು. ಸಾಲ ಕೊಡಿಸಿರುವ ₹ 20 ಸಾವಿರವನ್ನು ವಾಪಸ್‌ ಕೊಡುವಂತೆ ಪ್ರಮೋದ್‌ ದಬಾಯಿಸಿದರು.

ಸಾಲ ವಾಪಸ್‌ ನೀಡಲು ಎರಡು ದಿನ ಕಾಲಾವಕಾಶ ಬೇಕು ಎಂದು ನಿಮ್ಮ ಅಣ್ಣನಿಗೆ ನಿನ್ನೆಯೇ (ಏ.3) ಹೇಳಿದ್ದೇನೆ ಎಂದು ಧ್ರುವರಾಜ್‌ ಅರಸ್‌ ಆತನಿಗೆ ಹೇಳಿದರು. ಅಷ್ಟರಲ್ಲಿ ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಇಬ್ಬರು ಬಂದರು. ಆ ವಾಹನದಲ್ಲಿದ್ದ ಒಬ್ಬನಿಂದ ಪ್ರಮೋದ್‌ ಚೂರಿ ತೆಗೆದುಕೊಂಡು ಧ್ರುವರಾಜ್‌ನ ಎಡಪಕ್ಕೆಗೆ ಚುಚ್ಚಿದರು. ನಂತರ, ಮೂವರು ದ್ವಿಚಕ್ರವಾಹನದಲ್ಲಿ ಪರಾರಿಯಾದರು. ಧ್ರುವರಾಜ್‌ ಅವರನ್ನು ಆಸ್ಪತ್ರೆಗೆ ಒಯ್ದೆವು, ಅಲ್ಲಿ ಅವರು ಮೃತಪಟ್ಟರು’ ಎಂದು ದೂರಿನಲ್ಲಿ ದೂರುದಾರ ತಿಳಿಸಿದ್ದಾರೆ.

ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ 302 (ಕೊಲೆ), 34 (ಅಪರಾಧ ಸಂಚು), 504 (ಶಾಂತಿಭಂಗ), 506 (ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.