ಕಡೂರು: ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನ ಕೊರತೆಯಿಂದ ಬಳಲುತ್ತಿದೆ. ಇಲಾಖೆಯ ದೈನಂದಿನ ವೆಚ್ಚಕ್ಕೂ ಪರದಾಡುವಂತಾಗಿದೆ.
2022-23ನೇ ಸಾಲಿಗೆ ₹7.79 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಸರ್ಕಾರ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ₹5.74 ಕೋಟಿ ನಿಗದಿಪಡಿಸಿ ₹3.72 ಕೋಟಿ ಬಿಡುಗಡೆ ಮಾಡಿದೆ. ಉಳಿದ ₹2.2 ಕೋಟಿ ಹಣವನ್ನು ಆರ್ಥಿಕ ವರ್ಷ ಮುಗಿದರೂ ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ ಸಿಡಿಪಿಒ ಕಚೇರಿ ಬಾಡಿಗೆ, ದೈನಂದಿನ ನಿರ್ವಹಣೆಗೆ ಹಣದ ಕೊರತೆ ಎದುರಾಗಿದೆ.
ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯ 8 ತಿಂಗಳ ಬಾಡಿಗೆಯೇ ₹3.2 ಲಕ್ಷ ಬಾಕಿ ಉಳಿದಿದೆ. ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳ ಬಾಡಿಗೆ ಹಾಗೂ ಇಲಾಖೆ ದಾಸ್ತಾನು ಕೊಠಡಿಯ ಬಾಡಿಗೆ ಬಾಕಿ ₹2.5 ಲಕ್ಷವಿದೆ. ವಾಹನದ ಶುಲ್ಕ ₹2.5 ಲಕ್ಷವಿದೆ. ಕಳೆದ ಮೂರು ತಿಂಗಳಿನಿಂದ ಸಿಬ್ಬಂದಿ ವೇತನ ಪಾವತಿಯಾಗಿಲ್ಲ. ಕಚೇರಿ ನಿರ್ವಾಹಕರಿಗೆ ಕಚೇರಿಯ ನಿತ್ಯೋಪಯೋಗಿ ವಸ್ತುಗಳನ್ನು ಕೊಳ್ಳಲು ಕೊಡುವ ಮಾಸಿಕ ₹5 ಸಾವಿರ ಸಹ ನೀಡಿಲ್ಲ.
ಇದಿಷ್ಟೇ ಅಲ್ಲ. ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರಿಗೂ ಹಣ ಪಾವತಿಯಾಗಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಮೊಟ್ಟೆ ಸ್ಥಳೀಯವಾಗಿ ಕೊಳ್ಳುತ್ತಿದ್ದು, ಅದನ್ನೂ ಸಹ ಬಾಕಿ ಉಳಿಸಿಕೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಸ್ವಂತ ಹಣವನ್ನು ಮೊಟ್ಟೆ ಅಂಗಡಿಗೆ ನೀಡಬೇಕಾದ ಅನಿವಾರ್ಯತೆಯಿದೆ.
ಒಟ್ಟಾರೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವ ಕಾರಣದಿಂದ ಸರಬರಾಜಾಗುತ್ತಿರುವ ಪೌಷ್ಟಿಕ ಆಹಾರ ಸ್ಥಗಿತಗೊಂಡರೆ ಗರ್ಭಿಣಿ ಬಾಣಂತಿಯರಿಗೆ ತೊಂದರೆ ಎದುರಾಗಬಹುದೆಂಬ ಆತಂಕ ಸಾರ್ವಜನಿಕರದ್ದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.