ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನ ಕೈಹಿಡಿದ ಸ್ವಉದ್ಯೋಗ

ಅಡುಗೆ ಎಣ್ಣೆ ತಯಾರಿಕೆಯಲ್ಲಿ ಯಶಸ್ಸು ಕಂಡ ನಾಗರಾಜು
Last Updated 3 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕಡೂರು: ಅವರು ಓದಿದ್ದು ಎಂಬಿಎ, ಉದ್ಯೋಗ ಸಿಕ್ಕಿದರೂ ತೃಪ್ತಿಯಿಲ್ಲ. ಸ್ವಂತ ಉದ್ಯೋಗ ಮಾಡುವ ಕನಸನ್ನು ಹೊತ್ತವರು. ಅದರ ಫಲವೇ ಮೂಕಾಂಬಿಕಾ ಎಣ್ಣೆ ತಯಾರಿಕಾ ಘಟಕ. ಗ್ರಾಹಕರಿಗೆ ಉತ್ತಮ ದರ್ಜೆಯ ಅಡುಗೆ ಎಣ್ಣೆ ತಯಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ ಮಚ್ಚೇರಿಯ ಎಂ.ಎಂ.ನಾಗರಾಜು.

ಅವರದು ಕೃಷಿಕ ಕುಟುಂಬ. ಆದರೆ, ಹೆಚ್ಚೇನೂ ಜಮೀನಿಲ್ಲ. ಬರುವ ಆದಾಯವೂ ಅಷ್ಟಕ್ಕಷ್ಟೆ. ಓದು ಮುಗಿಸಿ ಕೆಲಸ ಸಿಕ್ಕರೂ ಸಂಬಳ ಜಾಸ್ತಿ ಸಿಗಲಿಲ್ಲ. ಏನು ಮಾಡುವುದೆಂಬ ಯೋಚನೆಯಲ್ಲಿದ್ದ ಸ್ವಂತ ಉದ್ಯಮ ಮಾಡಬೇಕೆಂಬ ಹಂಬಲ ಅವರನ್ನು ಕಾಡಿತು. ಜನರ ಆರೋಗ್ಯಕ್ಕೆ ಪೂರಕವಾಗಿ ಯಾವುದೇ ಕಲಬೆರಕೆಯಿಲ್ಲದ ಅಡುಗೆ ಎಣ್ಣೆ ತಯಾರಿಕೆಗೆ ಮುಂದಾದರು. ಅದಕ್ಕಾಗಿ ತಿಪಟೂರಿನಲ್ಲಿ ಐದು ತಿಂಗಳು ತರಬೇತಿ ಪಡೆದರು. ನಂತರ ಘಟಕ ಸ್ಥಾಪನೆಗೆ ಬೇಕಾದ ಬಂಡವಾಳಕ್ಕಾಗಿ ಬ್ಯಾಂಕ್ ಕದ ತಟ್ಟಿದರು. ಕರ್ಣಾಟಕ ಬ್ಯಾಂಕ್ ಸಾಲ ಮಂಜೂರು ಮಾಡಿತು. ಕಡೂರಿನ ಮರವಂಜಿ ರಸ್ತೆಯಲ್ಲಿ ಮೂಕಾಂಬಿಕಾ ಎಣ್ಣೆ ತಯಾರಿಕಾ ಘಟಕ ಆರಂಭವಾಯಿತು.

ಇದೀಗ ಘಟಕದಲ್ಲಿ ಒಟ್ಟು ನಾಲ್ಕು ಎಣ್ಣೆ ಗಾಣವಿದೆ. ನಿರಂತರವಾಗಿ ಕಾರ್ಯ ಮಾಡುತ್ತಿವೆ. ತಿಂಗಳಿಗೆ 3500 ಲೀಟರ್‌ಗೂ ಹೆಚ್ಚು ಅಡುಗೆ ಎಣ್ಣೆ ತೆಗೆಯುತ್ತಾರೆ. ಇಲ್ಲಿ ತಯಾರಾಗುವ ಎಣ್ಣೆಗೆ ಬೇಡಿಕೆಯೂ ಕುದುರಿದೆ.

ಲೀಟರ್ ಕಡಲೆಕಾಯಿ ಎಣ್ಣೆ ತೆಗೆಯಲು ಮೂರು ಕೆ.ಜಿ. ಕಡ್ಲೆಬೀಜ ಬೇಕಾಗುತ್ತದೆ. ಕೆ.ಜಿ.ಕಡ್ಲೆ ಬೀಜಕ್ಕೆ ₹ 120 ಬೆಲೆಯಿದೆ. ಆದರೆ, ಮಾರುಕಟ್ಟೆಯಲ್ಲಿ ₹ 200ಕ್ಕೆ ಒಂದು ಲೀಟರ್ ಹೇಗೆ ದೊರೆಯುತ್ತದೆ ಎಂಬುದನ್ನು ಯೋಚಿಸಿದರೆ ಆ ಎಣ್ಣೆಗೆ ಏನಾದರೂ ಬೆರಸಿರಲೇಬೇಕಲ್ಲವೆ? ಅಂತಹ ಕಲಬೆರಕೆ ಎಣ್ಣೆಯ ಸೇವನೆಯಿಂದ ಆರೋಗ್ಯವೂ ಹಾಳು. ಆದರೆ, ನಾವೇ ಕಡ್ಲೆ ಬೀಜ ಖರೀದಿಸಿ ತಂದು ಎಣ್ಣೆ ಮಾಡಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಿಂತ ಮುಖ್ಯವಾಗಿ ಅಂಗಡಿಯಲ್ಲಿ ಸಿಗುವ ಎಣ್ಣೆಗಿಂತ ಈ ಎಣ್ಣೆ ಬಳಕೆಯ ಪ್ರಮಾಣವೂ ಕಡಿಮೆಯಿರುತ್ತದೆ. ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು, ಕೊಬ್ಬರಿ ಎಣ್ಣೆ ತಯಾರಿಕೆಯಲ್ಲಿಯೂ ಹೀಗೆಯೇ ಇರುತ್ತದೆ. ಮೊದಮೊದಲು ಈ ವಾಸ್ತವಿಕ ಸಂಗತಿಯನ್ನು ಗ್ರಾಹಕರಿಗೆ ತಿಳಿಸಿದಾಗ ಬಂದ ಪ್ರತಿಕ್ರಿಯೆ ನಕಾರಾತ್ಮಕವಾಗಿತ್ತಾದರೂ ನಂತರದಲ್ಲಿ ನಿಧಾನವಾಗಿ ಅವರಲ್ಲೂ ಅರಿವು ಮೂಡಿತು. ಈಗ ಬಹಳಷ್ಟು ಜನರು ಅಡುಗೆ ಎಣ್ಣೆಯನ್ನು ಇಲ್ಲಿಯೇ ತೆಗೆದುಕೊಳ್ಳುತ್ತಿದ್ದಾರೆ. ಗ್ರಾಹಕರೂ ತೃಪ್ತರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸುವ ನಾಗರಾಜು, ಶೀಘ್ರದಲ್ಲಿಯೇ ಸ್ವಂತ ಬ್ರ್ಯಾಂಡ್‌ನಲ್ಲಿ ಅಡುಗೆ ಎಣ್ಣೆಗಳನ್ನು ತಯಾರಿಸುವ ಚಿಂತನೆಯಲ್ಲಿದ್ದಾರೆ. ಎಣ್ಣೆ ಹಾಕಿಡಲು ಬೇಕಾದ ಪ್ಲಾಸ್ಟಿಕ್ ಬಾಟಲಿಗಳನ್ನು ಸಗಟಾಗಿ ಅರಸೀಕೆರೆಯಿಂದ ತರಿಸಿಕೊಳ್ಳುತ್ತಾರೆ.

ಕಡ್ಲೆಕಾಯಿ, ಕೊಬ್ಬರಿ, ಸೂರ್ಯಕಾಂತಿ ಮುಂತಾದವುಗಳನ್ನು ತಾವೇ ತಂದು ಇಲ್ಲಿ ಎಣ್ಣೆ ಮಾಡಿಸಿಕೊಂಡು ಹೋಗುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಕೆಜಿಗೆ ₹ 15 ಪಡೆದು ಎಣ್ಣೆ ತಯಾರಿಸಿ ಕೊಡಲಾಗುತ್ತದೆ. ನಾಗರಾಜು ಸಂಪರ್ಕಕ್ಕೆ 8861182643.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT