ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ವೃದ್ಧಾಪ್ಯ ವೇತನ ವಾರದೊಳಗೆ ಸಮಸ್ಯೆ ಪರಿಹರಿಸಿ: ಸಿ.ಟಿ.ರವಿ ಸೂಚನೆ

ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 26 ಜೂನ್ 2020, 16:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವೃದ್ಧಾಪ್ಯ ವೇತನ ಆರು ತಿಂಗಳಿನಿಂದ ಕೆಲವರಿಗೆ ಪಾವತಿಯಾಗಿಲ್ಲ ಎಂಬ ದೂರುಗಳಿವೆ. ವಾರದೊಳಗೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವೃದ್ಧಾಪ್ಯ ವೇತನ ಪಾವತಿಯಾಗದಿರುವ ಬಗ್ಗೆ ಹಲವು ಹಳ್ಳಿಗಳಲ್ಲಿ ಜನ ಅಳಲು ತೋಡಿಕೊಂಡಿದ್ದಾರೆ. ಯಾಕೆ ಪಾವತಿಯಾಗಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ತಿಳಿಸಿದರು.

ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದಂತೆ 1,200 ಮಂದಿಯ ಪಟ್ಟಿ ಪರಿಶೀಲನೆ ಹಂತದಲ್ಲಿದೆ. ಪ್ರಕ್ರಿಯೆ ಮುಗಿದ ತಕ್ಷಣ ಪಾವತಿಯಾಗುತ್ತದೆ ಎಂದು ತಹಶೀಲ್ದಾರ್‌ ಕಾಂತರಾಜ್‌ ಸಭೆಗೆ ತಿಳಿಸಿದರು.

ವಾರದೊಳಗೆ ಕ್ರಮ ವಹಿಸದಿದ್ದರೆ ಶಿಸ್ತುಕ್ರಮ: ಹಿರೇಕೊಳಲೆ ಗ್ರಾಮದಲ್ಲಿ ಸ್ಮಶಾನ ಜಾಗ ಗುರುತಿಸಲು ಮೋಜಣಿಗೆ ಸೂಚಿಸಿ ವರ್ಷವಾಗುತ್ತಾ ಬಂದರೂ ಗಮನ ಹರಿಸಿಲ್ಲ, ವಾರದೊಳಗೆ ಕ್ರಮ ಮೋಜಣಿ (ಸರ್ವೆ) ಮಾಡಿ ವರದಿ ನೀಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತಿಗೆ ಸೂಚಿಸಲಾಗುವುದು ಎಂದು ಸಚಿವ ರವಿ ಎಚ್ಚರಿಕೆ ನೀಡಿದರು.

37 ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಹಿಂದಿನ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಸ್ಮಶಾನ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು ಮತ್ತು ಕಡೆ ಸ್ಮಶಾನ ಇಲ್ಲದಿರುವ ಜಾಗ ಗುರುತಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಈವರೆಗೂ ಕ್ರಮವಹಿಸಿಲ್ಲ ಎಂದು ಸಿಡಿಮಿಡಿಗೊಂಡರು.

ಯಗಚಿ ನದಿ ಪಾತ್ರ ಸರ್ವೆ ಮಾಡಬೇಕು. ಈ ಪಾತ್ರದ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಬೇಕು. ಒತ್ತುವರಿಯಾಗಿದ್ದರೆ ನೋಟಿಸ್‌ ಜಾರಿ ಮಾಡಿ ತೆರವುಗೊಳಿಸಲು ಕ್ರಮ ವಹಿಸಬೇಕು. ಗೌರಿ ಕಾಲುವೆ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು. ನಕಾಶೆ ಆಧರಿಸಿ ಅಳತೆ ಮಾಡಬೇಕು. ಉದ್ದ, ಅಗಲ, ಬಫರ್‌ ಜೋನ್‌ ಎಲ್ಲವನ್ನು ಗುರುತಿಸಬೇಕು. ಹೀಗೆ ಮಾಡಿದರೆ ಒತ್ತುವರಿ ತೆರವಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

94ಸಿ, 94ಸಿಸಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. 50, 53ರಲ್ಲಿ ಮಂಜೂರಾತಿ ಆದವರಿಗೆ ಸಾಗುವಳಿ ಪತ್ರ ನೀಡಬೇಕು. ಒಂದು ತಿಂಗಳಲ್ಲಿ ಮುಗಿಸಬೇಕು ಎಂದು ಗಡುವು ನೀಡಿದರು.

ಜಿಲ್ಲೆಯಲ್ಲಿ 504 ಶಾಲೆಗಳಿವೆ. 15 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳು 114 ಹಾಗೂ 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಶಾಲೆಗಳು 64 ಇವೆ. 44 ಶಾಲೆಗಳನ್ನು ಮುಚ್ಚಲಾಗಿದೆ. ನಗರದ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜನ್ನು ಕೆಪಿಎಸ್‌ ಶಾಲೆಯಾಗಿಸಲು ಪ್ರಸ್ತಾವ ಸಲ್ಲಿಸಿದ್ದೇವೆ. ಅಂಗರವಳ್ಳಿ, ಕೆ.ಬಿ.ಹಾಳ್‌, ಅಂಬಳೆ, ಗೌಡನಹಳ್ಳಿ, ಮಲ್ಲೇನಹಳ್ಳಿ, ಆಲ್ದೂರು ಹಾಗೂ ಅಲ್ಲಂಪುರ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಯಾಗಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌ ತಿಳಿಸಿದರು.

69 ಅನಧಿಕೃತ ಹೋಂ ಸ್ಟೇ: 304 ಹೋಂ ಸ್ಟೇ ಇವೆ. ಈ ಪೈಕಿ 235 ನೋಂದಣಿಯಾಗಿದೆ, 69 ಅನಧಿಕೃತ ಇವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಡಿ.ರೇವಣ್ಣ ತಿಳಿಸಿದರು.

ಮಳಲೂರು, ಇತರ ಕಡೆ ಹೊಲಗಳಲ್ಲಿ ಆಲೂಗಡ್ಡೆ ಬಿತ್ತನೆ ಬೀಜದ ಸಮಸ್ಯೆಗೆ ಸಂಬಂಧಿಸಿದಂತೆ ಹಾಸನದ ಸೋಮನಹಳ್ಳಿ ಕಾವಲ್‌ನ ತಜ್ಞರು ತಂಡ ಪರಿಶೀಲನೆ ನಡೆಸಿತ್ತು. ತೇವಾಂಶ ಜಾಸ್ತಿಯಾಗಿ ಈ ಭಾಗದಲ್ಲಿ ಬಿತ್ತನೆಬೀಜ ಕರಗಿದೆ ಎಂದು ತಂಡ ವರದಿ ನೀಡಿದೆ ಎಂದು ತೋಟಗಾರಿಕೆ ಅಧಿಕಾರಿ ಪೃಥ್ವಿಜಿತ್‌ ಸಭೆಗೆ ತಿಳಿಸಿದರು.

ಕಾರ್ಯಾಗಾರ ಆಯೋಜನೆಗೆ ಸಲಹೆ: ಹೋಮ್‌ ಸ್ಟೆಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಘನ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ನಿಟ್ಟಿನಲ್ಲಿ ಹೋಮ್‌ ಸ್ಟೆಗಳವರಿಗೆ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಪರಿಸರ ಇಲಾಖೆ ಜತೆಗೂಡಿ ಕಾರ್ಯಾಗಾರವೊಂದನ್ನು ಆಯೋಜಿಸುವಂತೆ ಸಚಿವ ರವಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT