ಶನಿವಾರ, ಏಪ್ರಿಲ್ 1, 2023
23 °C
ನಿಶ್ಚಿತಾರ್ಥ ಸಮಾರಂಭದಲ್ಲಿ ಬಸವರಾಜಪ್ಪರ ‘ಪಾರಿಜಾತ’ ಕೃತಿ ಬಿಡುಗಡೆ

ಸಾಹಿತ್ಯದಿಂದ ಉತ್ತಮ ಸಮಾಜ: ಕಿಮ್ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎನ್.ಆರ್.ಪುರ: ‘ಸಾಹಿತ್ಯದಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಜದ ಅಮೂಲ್ಯ ಫಾರಂನಲ್ಲಿ ಸೋಮವಾರ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಿ.ಕೆ.ಬಸವರಾಜಪ್ಪರ  ‘ಪಾರಿಜಾತ’ ಎಂಬ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾವು ಕಾಲಕ್ಕೆ ತಕ್ಕಂತೆ ಬದುಕ ಬೇಕಾಗಿರುವುದರಿಂದ ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ವರ್ತಮಾನಕ್ಕೆ, ಭವಿಷ್ಯಕ್ಕೆ ಅಗತ್ಯವಾದ ಸಂಪ್ರದಾಯವನ್ನು ಬೆಳೆಸಿಕೊಳ್ಳ ಬೇಕಾಗಿದೆ. ಇಂದು ನಮ್ಮ ಸಮಾಜ ಹಾಳಾಗಿದ್ದರೆ ಅದಕ್ಕೆ ಶಾಸಕಾಂಗ, ಕಾರ್ಯಾಂಗ ಹಾಗೂ ಎಲ್ಲವನ್ನೂ ತಿಳಿದ ವಿದ್ಯಾವಂತರು, ಬುದ್ಧಿವಂತರು ಕಾರಣರಾಗಿದ್ದಾರೆ. ಏನೂ ಮಾತನಾಡದ ಸಾಮಾನ್ಯ ಜನರಿಂದ ಸಮಾಜ ಹಾಳಾಗಿಲ್ಲ’ ಎಂದರು.

‘ಪಿ.ಕೆ.ಬಸವರಾಜಪ್ಪ ಅವರು ‘ಪಾರಿಜಾತ’ದಲ್ಲಿ ಧರ್ಮ, ಆಚಾರ–ವಿಚಾರಗಳ ಬಗ್ಗೆ ಹಾಗೂ ಮನುಷ್ಯ ಹೇಗೆ ಬದುಕಬೇಕು? ಎಂಬ ಬಗ್ಗೆ ವಿವರಿಸಿದ್ದಾರೆ. ತಮ್ಮ ಮಗಳ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಸಾಹಿತ್ಯದ ವಾತಾವರಣ ಉಂಟು ಮಾಡಿ ಪುಸ್ತಕ ಬಿಡುಗಡೆ ಮಾಡಿರುವುದು ಶ್ಲಾಘನೀಯವಾಗಿದೆ. ನಾನು ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಯು.ಆರ್. ಅನಂತಮೂರ್ತಿ, ಲಂಕೇಶ್‍ ಅವರ ಪುಸ್ತಕಗಳನ್ನು ಓದಿದ್ದೇನೆ. ಸಾಹಿತ್ಯವು ಬದುಕಿಗೆ ಬೇಕಾದ ಒಳ್ಳೆಯ ಮಾರ್ಗದರ್ಶನ ನೀಡುತ್ತದೆ. ಕತ್ತಿ, ಗುರಾಣಿ ಹಿಡಿಯುವ ಕೈಗಳು ಅದನ್ನು ಬಿಟ್ಟು ಸಾಹಿತ್ಯ ಓದಿದರೆ ಉತ್ತಮ ಮನುಷ್ಯರಾಗಿ ಬೆಳೆಯುತ್ತಾರೆ’ ಎಂದರು.

ಜೆಡಿಎಸ್‍ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ‘ಬಸವರಾಜಪ್ಪ ತಮ್ಮ ಕೃತಿಯಲ್ಲಿ ಮದುವೆ, ಸಂಸ್ಕಾರ, ಧರ್ಮ ಹಾಗೂ ಸಂಪ್ರದಾಯದ ಬಗ್ಗೆ ಉತ್ತಮವಾಗಿ ಬರೆದಿದ್ದಾರೆ. ಮನುಷ್ಯನಿಗೆ ಸಂಸ್ಕಾರ ಬಹಳ ಮುಖ್ಯ. ಪ್ರತಿಯೊಬ್ಬರೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕ ಓದುವುದರಿಂದ ಸಂಸ್ಕಾರ, ತಿಳಿವಳಿಕೆ, ಜ್ಞಾನ ಉಂಟಾಗಲಿದೆ. ಮೇರು ಸಾಹಿತಿ ಕುವೆಂಪು ಅವರು ಮಂತ್ರ ಮಾಂಗಲ್ಯದಿಂದ ಸರಳ ಮದುವೆ ಮಾಡಬೇಕು ಎಂದು ಪ್ರತಿಪಾದಿಸಿದ್ದರು. ಮಂತ್ರ ಮಾಂಗಲ್ಯದಿಂದ ಸರಳ ಮದುವೆ ಜತೆಗೆ ಕುಟುಂಬದವರಿಗೆ ಆರ್ಥಿಕ ಭದ್ರತೆ ಹಾಗೂ ಮೌಢ್ಯಗಳಿಂದ ಜನರನ್ನು ದೂರ ಮಾಡಬೇಕು ಎಂಬ ಚಿಂತನೆಯೂ ಕುವೆಂಪು ಅವರಿಗೆ ಇತ್ತು. ಆದರೆ, ಇಂದು ಜನರು ಸರಳ ಮದುವೆ ಮಾಡದೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಅದ್ಧೂರಿ ಮದುವೆ ಮಾಡುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಪಾರಿಜಾತ ಪುಸ್ತಕದ ಲೇಖಕ ಪಿ.ಕೆ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಕೊಪ್ಪದ ಎಚ್.ಜಿ.ವೆಂಕಟೇಶ್, ಶಿವಮೊಗ್ಗ ನಿವೃತ್ತ ಡಿವೈಎಸ್ಪಿ ನಂಜೇ ಗೌಡ, ಆಕಾಶ ವಾಣಿ ಭದ್ರಾವತಿಯ ಕಾರ್ಯಕ್ರಮ ಸಂಯೋಜಕ ಸುದರ್ಶನ್, ಮುಖಂಡರಾದ ಎಸ್.ಎಸ್. ಶಾಂತ ಕುಮಾರ್, ಡಿ.ಸಿ.ದಿವಾಕರ, ಕಳಸಪ್ಪ, ಎಲ್.ಎಂ.ಸತೀಶ್, ಬಿ.ಕೆ.ಜಾನಕೀರಾಂ, ಶ್ಯಾಮಲಾ ಸತೀಶ್, ಹೇಮಾವತಿ, ಅನಿಕಾ ಬಸವರಾಜಪ್ಪ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.