ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿಸಿ ರೈತರ ಆಕ್ರೋಶ

ಕಳಪೆ ಶೇಂಗಾ ಬಿತ್ತನೆ ಬೀಜ ವಿತರಣೆ ಆರೋಪ: ಹಣ ವಾಪಸ್‌ ಕೊಡಿಸಿದ ಕೃಷಿ ಇಲಾಖೆ
Published 24 ಜೂನ್ 2024, 16:04 IST
Last Updated 24 ಜೂನ್ 2024, 16:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಳಪೆ ಬಿತ್ತನೆ ಬೀಜ ವಿತರಿಸಿದ್ದರಿಂದ ಬಿತ್ತನೆ ಮಾಡಿದ್ದ ಶೇಂಗಾ ಮೊಳಕೆಯೊಡೆಯದೆ ಹಾಳಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಲಕ್ಯಾ ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ರೈತರು ಹೊಲ ಹದಗೊಳಿಸಿ ಶೇಂಗಾ ಬಿತ್ತನೆಗೆ ಕಾದಿದ್ದರು. ರೈತ ಸಂಪರ್ಕ ಕೇಂದ್ರಕ್ಕೆ ಮೊದಲಿಗೆ ಬಂದ ಬಿತ್ತನೆ ಬೀಜ ಪಡೆದು ಬಿತ್ತನೆಯನ್ನೂ ಮಾಡಿದ್ದರು. ತಿಂಗಳಾದರೂ ಮೊಳಕೆಯೊಡೆಯದೆ ಇದ್ದಾಗ ರೈತರು ಕಂಗಾಲಾದರು.

ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ದಿನ ಬಂದಿದ್ದ ಶೇಂಗಾ ಬಿತ್ತನೆ ಬೀಜ ಪಡೆದಿದ್ದ ಬಹುತೇಕ ರೈತರ ಸ್ಥಿತಿ ಇದೆ ಆಗಿದೆ ಎಂಬುದು ತಿಳಿದು ಬಳಿಕ ಪ್ರತಿಭಟನೆಗೆ ರೈತರು ಮುಂದಾದರು.

ಹೊಲ ಹಸನು ಮಾಡಿ ಹದವಾದ ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಬೀಜ, ರಸಗೊಬ್ಬರ, ಕಾರ್ಮಿಕರ ಕೂಲಿ ಸೇರಿ ಎಕರೆಗೆ ಕನಿಷ್ಠ  ₹10 ಸಾವಿರ ಖರ್ಚಾಗಿದೆ. ಈಗ ಮತ್ತೊಮ್ಮೆ ಬಿತ್ತನೆ ಮಾಡಿದರೂ ವಾತಾವರಣ ಬದಲಾಗಿರುವುದರಿಂದ ಶೇಂಗಾ ಬೆಳೆ ಬರುವುದಿಲ್ಲ. ಕಳಪೆ ಬಿತ್ತನೆ ಬೀಜ ಪೂರೈಸಿದ್ದರಿಂದ ರೈತರು ತೊಂದರೆ ಅನುಭವಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿತ್ತನೆ ಬೀಜದ ಹಣವನ್ನಾದರೂ ವಾಪಸ್‌ ಕೊಡಿಸಬೇಕು. ಅಲ್ಲಿಯ ತನಕ ರೈತ ಸಂಪರ್ಕ ಕೇಂದ್ರ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಸೋಮವಾರ ಬಾಗಿಲು ಮುಚ್ಚಿಸಿದರು.

ಬಿತ್ತನೆ ಮಾಡಿದ್ದ ಶೇಂಗಾ ಯಾವ ಕಾರಣಕ್ಕೆ ಮೊಳಕೆಯೊಡೆದಿಲ್ಲ ಎಂಬುದು ಗೊತ್ತಿಲ್ಲ. ಬಿತ್ತನೆ ಬೀಜದ ಹಣ ವಾಪಸ್‌ ಕೊಡಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದರಿಂದ ನಿಗಮದಿಂದ ವಾಪಸ್‌ ಕೊಟ್ಟಿದ್ದಾರೆ.
–ಸುಜಾತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು, ʼರಾಷ್ಟ್ರೀಯ ಬೀಜ ನಿಗಮದ ಮೂಲಕವೇ ಶೇಂಗಾ ಬಿತ್ತನೆ ಬೀಜ ತರಿಸಿ ರೈತರಿಗೆ ವಿತರಣೆ ಮಾಡಿಸಲಾಗಿದೆ. ಕಳಪೆ ಬಿತ್ತನೆ ಬೀಜ ಎಂದು ಆರೋಪಿಸುತ್ತಿರುವುದರಿಂದ ರೈತರಿಗೆ ಹಣ ವಾಪಸ್‌ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆʼ ಎಂದರು. 

ರೈತರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು, 27 ರೈತರು ಬಿತ್ತನೆ ಬೀಜ ಖರೀದಿಸಿದ್ದ ಮೊತ್ತ ₹1,68,720 ವಾಪಸ್‌ ಕೊಡಿಸಿದರು. ಬಳಿಕ ರೈತ ಸಂಪರ್ಕ ಕೇಂದ್ರದ ಬೀಗ ತೆರೆಯಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT