ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪಿಯು ಕಾಲೇಜು ಸ್ಥಳಾಂತರ: ಪ್ರತಿಭಟನೆ

Last Updated 1 ಜುಲೈ 2022, 1:36 IST
ಅಕ್ಷರ ಗಾತ್ರ

ಮುತ್ತಿನಕೊಪ್ಪ (ಎನ್.ಆರ್.ಪುರ): ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕಾಗಿ ಸರ್ಕಾರ ಮಂಗಳೂರಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಗುರುವಾರ ಮುತ್ತಿನಕೊಪ್ಪ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮುತ್ತಿನ ಕೊಪ್ಪ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಎಲ್. ಮನೋಹರ್ ಮಾತನಾಡಿ, ಶಾಸಕರ ಗಮನಕ್ಕೂ ತರದೆ ಸರ್ಕಾರ ಏಕಾ ಏಕಿ ಇಲ್ಲಿನ ಪದವಿಪೂರ್ವ ಕಾಲೇಜನ್ನು ಮಂಗಳೂರಿಗೆ ಸ್ಥಳಾಂತರ ಮಾಡಿದ್ದನ್ನು ಖಂಡಿಸುತ್ತೇವೆ. ಈ ಕಾಲೇಜು ಆರಂಭವಾಗಿ 26ವರ್ಷ ವಾಗಿದ್ದು ಇಲ್ಲಿ ಬಡವರ್ಗದ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿದ್ದು ಕಳೆದ ವರ್ಷ 13 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸಕ್ತ ಸಾಲಿನಲ್ಲಿ 12 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜು ವರ್ಗಾವಣೆ ಆದೇಶ ರದ್ದಾಗುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಸರ್ಕಾರ ನಮ್ಮ ಗಮನಕ್ಕೂ ತರದೆ ಮುತ್ತಿನಕೊಪ್ಪ ಪದವಿ ಪೂರ್ವ ಕಾಲೇಜು ಬೇರೆಡೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಸ್ಥಳಾಂತರ ಮಾಡಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಶಾಸಕರೊಂದಿಗೆ ಚರ್ಚೆ ನಡೆಸದೆ ಕಾಲೇಜು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದರು.

‘ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ 1993ರಲ್ಲಿ ಈ ಕಾಲೇಜು ಆರಂಭವಾಗಿತ್ತು. ಆದೇಶ ರದ್ದಾಗುವವರೆಗೂ ಪಕ್ಷಾತೀತ ಹೋರಾಟ ಮಾಡೋಣ, ಸರ್ವಪಕ್ಷಗಳ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ದು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಲಾಗುವುದು.ಆದೇಶ ರದ್ದಾಗುವವರೆಗೂ ಹೋರಾಟ ಮುಂದುವರೆಸೋಣ. ಗ್ರಾಮಸ್ಥರ ಜತೆ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ಇಂದು ಪ್ರತಿಭಟನೆ ನಿಲ್ಲಿಸಿ’ ಎಂದು ಮನವಿ ಮಾಡಿದರು.

ಮುತ್ತಿನಕೊಪ್ಪ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಕಾರ್ಯಾಧ್ಯಕ್ಷ ವಿ.ನಿಲೇಶ್ ಮಾತನಾಡಿ, ಸರ್ಕಾರದ ಆದೇಶವನ್ನು ಡಿಡಿಪಿಯು ಅವರು ಶಾಸಕರ ಗಮನಕ್ಕೆ ತರಬೇಕಾಗಿತ್ತು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಶಿಕ್ಷಣ ಸಚಿವ ನಾಗೇಶ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಎಲ್ಲರೂ ಒಟ್ಟಾಗಿ ಕಾಲೇಜು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದರು.

ಪ್ರತಿಭಟನೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅನಿಲ್, ಅಭಿವೃದ್ಧಿ ಸಮಿತಿಯ ಸದಸ್ಯರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ, ಉಪಾಧ್ಯಕ್ಷೆ ಕಾವ್ಯ, ಸದಸ್ಯ ನರೇಂದ್ರ, ಜೆಡಿಎಸ್ ಮುಖಂಡ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಮುಖಂಡರಾದ ನಟರಾಜ್, ಉಪೇಂದ್ರ, ಸುನಿಲ್, ಎಸ್.ಡಿ.ರಾಜೇಂದ್ರ, ಬಿನೋಯಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ರಶ್ಮಿ ದಯಾನಂದ್, ಬಿ.ಎಸ್.ಸುಬ್ರಹ್ಮಣ್ಯ, ಎಂ.ಎನ್.ನಾಗೇಶ್, ಭರತ್, ಗೋಪಿ, ಮಂಜುನಾಥ್ ಅಶ್ವನ್, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT