ಶನಿವಾರ, ನವೆಂಬರ್ 28, 2020
26 °C
ನರಸಿಂಹರಾಜಪುರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ!

ನರಸಿಂಹರಾಜಪುರ ಪಟ್ಟಣದಲ್ಲಿ ನಿಸರ್ಗ ಕರೆಗೂ ಸಾರ್ವಜನಿಕರ ಪರದಾಟ

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯದ ಸೌಲಭ್ಯವಿಲ್ಲದೆ ಬೇರೆ, ಬೇರೆ ಭಾಗಗಳಿಂದ ಬರುವ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಪ್ರಮುಖ ಭಾಗವಾದ ನೀರಿನ ಟ್ಯಾಂಕ್ ವೃತ್ತದಿಂದ ಹಿಡಿದು ಮಿನಿ ವಿಧಾನಸೌಧದವರೆಗೂ ಎಲ್ಲಿಯೂ ಸಾರ್ವಜನಿಕ ಶೌಚಾಲಯ ಇಲ್ಲ. ಸರ್ಕಾರಿ ಆಸ್ಪತ್ರೆ, ಸಂತೆ ಮಾರುಕಟ್ಟೆ, ಪಟ್ಟಣ ಪಂಚಾಯಿತಿ ಮುಂಭಾಗ ಹಾಗೂ ನೀರಿನ ಟ್ಯಾಂಕ್ ವೃತ್ತದಲ್ಲಿ ಸಾಮಾನ್ಯವಾಗಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ಬ್ಯಾಂಕ್, ಅಂಚೆ ಕಚೇರಿ, ಬಸ್ ತಂಗುದಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳು, ಗ್ರಂಥಾಲಯ, ಸರ್ಕಾರಿ ಶಾಲಾ–ಕಾಲೇಜು, ಖಾಸಗಿ ಅಂಗಡಿಗಳು ಇವೆ.

ಬಸ್ ನಿಲ್ದಾಣದ ಸಮೀಪದಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿರುವುದರಿಂದ ಜನರು ಶೌಚಾಲಯಕ್ಕೆ ಹೋಗಬೇಕಾದಲ್ಲಿ ಸಾಕಷ್ಟು ದೂರದಲ್ಲಿ ವಾಹನವನ್ನು ನಿಲ್ಲಿಸಿ, ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗುವ ಸ್ಥಿತಿಯಿದೆ. ಮಳೆಗಾಲದಲ್ಲಂತೂ ಜನರ ಕಷ್ಟ ಹೇಳ ತೀರದಾಗಿದೆ.

ನೀರಿನ ಟ್ಯಾಂಕ್ ವೃತ್ತದ ಸಮುದಾಯ ಭವನದ ವ್ಯಾಪ್ತಿಯಲ್ಲಿ ಶೌಚಾಲಯವಿದ್ದರೂ, ಅದು ಬಾಗಿಲು ಮುಚ್ಚಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

‘ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು ಹೊರತುಪಡಿಸಿದರೆ, ಬೇರೆ ಯಾವ ಭಾಗದಲ್ಲೂ ಶೌಚಾಲಯದ ಸೌಲಭ್ಯ ಇಲ್ಲದಿರುವುದರಿಂದ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಳೇಪೇಟೆ ನಾಗರಾಜ್.

‘ಸರ್ಕಾರಿ ಆಸ್ಪತ್ರೆ ಸಮೀಪ, ಪಟ್ಟಣ ಪಂಚಾಯಿತಿ ಸಮೀಪ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಅಬ್ದುಲ್‌ ಸುಬಾನ್.

‘ಪಟ್ಟಣ ಪಂಚಾಯಿತಿ ಸಮೀಪ, ಮಿನಿ ವಿಧಾನಸೌಧದ ಬಳಿ ಶೌಚಾಲಯ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ನೀರಿನ ಟ್ಯಾಂಕ್ ವೃತ್ತದಲ್ಲಿರುವ ಶೌಚಾಲಯವನ್ನು ಶೀಘ್ರದಲ್ಲೇ ಸಾರ್ವಜನಿಕ ಮುಕ್ತಗೊಳಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು