ಗುರುವಾರ , ಡಿಸೆಂಬರ್ 3, 2020
23 °C
₹ 10 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ

ತರೀಕೆರೆ: 3 ವರ್ಷ ಕಳೆದರೂ ಹನಿ ನೀರು ಬಂದಿಲ್ಲ!

ದಾದಾಪೀರ್ Updated:

ಅಕ್ಷರ ಗಾತ್ರ : | |

Prajavani

ತರೀಕೆರೆ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆದಿರುವ ಅಲ್ಪಸಂಖ್ಯಾತರರ ಕಲ್ಯಾಣ ಇಲಾಖೆಯು ಮೂರು ವರ್ಷ ಕಳೆದರೂ ಒಂದು ಹನಿ ನೀರನ್ನೂ ಜನರಿಗೆ ಕೊಡದೆ ಇರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಪಟ್ಟಣದ ವಾರ್ಡ್ ನಂ.1ರ ಕೋಟೆ ಕ್ಯಾಂಪ್‌ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು 2017-18 ನೇ ಸಾಲಿನಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆ ಮೂಲಕ ಅಲ್ಪಸಂಖ್ಯಾತರರ ಕಲ್ಯಾಣ ಇಲಾಖೆಯು ನಿರ್ಮಾಣ ಮಾಡಿದೆ.

ಕಾಮಗಾರಿಯ ಗುತ್ತಿಗೆ ಸಂಸ್ಥೆ ಹಣ ಪಡೆದುಕೊಂಡು ಕೈ ತೊಳೆದುಕೊಂಡಿದೆ. ಆದರೆ, ಘಟಕದಲ್ಲಿ ಈತನಕ ನೀರೇ ಬಂದಿಲ್ಲ ಎಂಬುದು ಸ್ಥಳೀಯರ ದೂರು.

ಘಟಕ ನಿರ್ಮಾಣಕ್ಕಾಗಿ ಪುರಸಭೆ ವತಿಯಿಂದ ನಿವೇಶನ, ಕಟ್ಟಡ ಹಾಗೂ ಕೊಳವೆಬಾವಿಯ ವ್ಯವಸ್ಥೆ ಮಾಡಿ ನೀರು ನೀಡುತ್ತಿದೆ. ಘಟಕ ನಿರ್ಮಾಣವಾಗಿದ್ದರೂ ಆರಂಭ ಭಾಗ್ಯ ಕಂಡಿಲ್ಲ. ಘಟಕದ ಬಾಗಿಲುಗಳು ಕಾಲದ ಹೊಡೆತಕ್ಕೆ ಸಿಲುಕಿ ಒಡೆದು ಹೋಗಿವೆ. ಬಳಕೆಯಾಗದ ಕಾರಣ ಘಟಕದ ಯಂತ್ರಗಳು ಮತ್ತು ವಾಟರ್ ಫಿಲ್ಟರ್ ಕೂಡ ಕೆಟ್ಟು ಹೋಗಿವೆ.

ಪ್ರಸ್ತುತ ಕೋಟೆ ಕ್ಯಾಂಪ್‌ನಲ್ಲಿ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಇದಕ್ಕೆ ಹೊಂದಿಕೊಂಡಿರುವ ಅಂಬೇಡ್ಕರ್ ಕಾಲೊನಿಯಲ್ಲಿ ನೂರಾರು ಮಂದಿ ವಾಸಿಸುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಶುದ್ಧ ನೀರು ಕೊಡುವಲ್ಲಿ ಹಿಂದೆ ಬಿದ್ದಿರುವ ಪುರಸಭೆ ಆಡಳಿತದಿಂದಾಗಿ ಇಲ್ಲಿನ ಬಡ ಜನರು ಖಾಸಗಿ ಕುಡಿಯುವ ನೀರಿನ ಘಟಕಗಳನ್ನೇ ಅವಲಂಬಿಸಿ, ದುಬಾರಿ ಬೆಲೆಗೆ ನೀರನ್ನು ತಂದು ಕುಡಿಯುತ್ತಿದ್ದಾರೆ.

‘ಸರ್ಕಾರದ ವತಿಯಿಂದ ಕಡಿಮೆ ದರಕ್ಕೆ ನೀರು ನೀಡಬೇಕಾಗಿದ್ದ ಘಟಕಗಳು ಆರಂಭವಾಗದೇ ಹಳ್ಳ ಹಿಡಿದಿವೆ. ಇದಕ್ಕೆ ಕಾರಣರಾದ ನಿರ್ವಹಣೆಗಾರರನ್ನು ಶಿಕ್ಷಿಸಬೇಕು’ ಎಂದು ವಾರ್ಡ್ ವಾಸಿಗಳಾದ ಮೊಹಮದ್ ಜಿಯಾಉಲ್ಲಾ ಮತ್ತು ರಮೇಶ್ ಒತ್ತಾಯಿಸಿದ್ದಾರೆ.

‘ಘಟಕ ನಿರ್ವಹಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಪರ್ದಿಗೆ ನೀಡುವ ಮೂಲಕ ಜನರಿಗೆ ನಿಗದಿತ ದರದಲ್ಲಿ ನೀರು ನೀಡುವ ಯೋಚನೆಯಿದೆ’ ಎಂದು ಪುರಸಭೆ ಎಂಜಿನಿಯರ್‌ ಬಿಂದು ಹೇಳಿದ್ದಾರೆ.

‘ಕೆ.ಆರ್.ಐ.ಡಿ.ಎಲ್ ಸಂಸ್ಥೆ ಘಟಕದ ನಿರ್ವಹಣೆಯನ್ನು ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಿಲ್ಲಾ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಪ್ರದೀಪ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು