ಮಂಗಳವಾರ, ಮಾರ್ಚ್ 9, 2021
18 °C
ದಿನವಿಡೀ ನ್ಯಾಯಬೆಲೆ ಅಂಗಡಿಯಲ್ಲಿ ಕಾಯುವ ಗ್ರಾಹಕರು

ಚಿಕ್ಕಮಗಳೂರು: ಪಡಿತರ ಪಡೆಯಲು ನೆಟ್‍ವರ್ಕ್ ಸಮಸ್ಯೆ

ರವಿಕುಮಾರ್ ಶೆಟ್ಟಿಹಡ್ಲು Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಪ್ರಧಾನ್‍ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲಾಗುತ್ತಿದ್ದು, ತಾಲ್ಲೂಕಿನ ಕೆಲವೆಡೆ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಜನರು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ.

ಕೆಲವು ದಿನಗಳಿಂದ ನಿರಂತರ ಗಾಳಿ, ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಉಂಟಾಗಿರುವುದರಿಂದ ಕೆಲವಡೆ ವಿದ್ಯುತ್ ಇದ್ದಾಗ ಮಾತ್ರ ಟವರ್ ಕಾರ್ಯ ನಿರ್ವಹಿಸುತ್ತದೆ. ಪಡಿತರದಾರರ ಮೊಬೈಲ್ ನಂಬರ್‌ಗೆ ಒಟಿಪಿ ನಂಬರ್ ಬಂದ ನಂತರ ಪಡಿತರ ವಿತರಿಸಲು ಸಾಧ್ಯ. ಇಲ್ಲದಿದ್ದಲ್ಲಿ ಪಡಿತರ ಅಂಗಡಿಯಲ್ಲಿ ಸಂಜೆ ವರೆಗೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗ‍ಟ್ಟುವ ಸಲುವಾಗಿ, ಪಡಿತರ ಅಂಗಡಿಯಲ್ಲಿ ಹೆಚ್ಚಿನ ಜನರು ಬಂದು ನಿಲ್ಲುವುದನ್ನು ತಪ್ಪಿಸಿ, ವ್ಯಕ್ತಿ ಅಂತರ ಕಾಯ್ದುಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿತರ ಅಂಗಡಿಯಲ್ಲಿ ಎರಡು, ಮೂರು ಗ್ರಾಮಗಳಿಗೆ ಒಂದು ದಿನದಂತೆ ನಿಗದಿಪಡಿಸಿ, ಪಡಿತರ ಪಡೆಯಲು ಅವಕಾಶ ನೀಡಲಾಗಿದೆ. ಆದರೂ,
ಇದ್ದ ಕೆಲವೇ ಮಂದಿಗೆ ಪಡಿತರ ವಿತರಿಸಲು ವಿದ್ಯುತ್ ಹಾಗೂ ನೆಟ್‍ವರ್ಕ್‌
ಸಮಸ್ಯೆ ತಪ್ಪಿಲ್ಲ.

ಮೊಬೈಲ್ ಹೊಂದಿಲ್ಲದ ಗ್ರಾಹಕರಿಗೆ ಒಟಿಪಿ ನಂಬರ್ ಪಡೆಯುವುದು ಕಷ್ಟ. ಅಂತಹವರಿಗೆ ಒಟಿಪಿ ಪಡೆಯದೇ, ಹೆಬ್ಬೆರಳು ಗುರುತು ಪಡೆದು ಪಡಿತರ ವಿತರಿಸಲು ಸಾಧ್ಯವಿದ್ದರೂ, ಈ ನಡುವೆ ಸರ್ವರ್ ಬ್ಯುಸಿಯಿಂದಾಗಿ ಗ್ರಾಹಕರಿಗೆ ಪಡಿತರ ಪಡೆಯಲು ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎಂದಿನಂತೆ ಮುಂದುವರಿದಿದೆ.

ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಗಡಿಕಲ್‍ನಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಪಡಿತರ ಪಡೆಯಲು ಗ್ರಾಹಕರು ಬೆಳಿಗ್ಗೆ 9 ಗಂಟೆಗೆ ಬಂದಿದ್ದರೂ ವಿದ್ಯುತ್ ಸಮಸ್ಯೆ ಇದ್ದಿದ್ದರಿಂದ ವಿತರಕರಿಗೆ ಕಂಪ್ಯೂಟರ್ ಕೆಲಸ ನಡೆಸಲು ಕಷ್ಟವಾಗಿತ್ತು. ವಿದ್ಯುತ್ ಬಂದ ನಂತರ ಸರ್ವರ್ ಬ್ಯುಸಿಯಿಂದಾಗಿ ಮತ್ತಷ್ಟು ಸಮಯ ಕಾಯಬೇಕಾಗಿ ಬಂತು. ಈ ಭಾಗದಲ್ಲಿ ಬಿಎಸ್‍ಎನ್‍ಎಲ್ ನೆಚ್ಚಿಕೊಂಡಿರುವ ಬಹುತೇಕ ಗ್ರಾಹಕರಿಗೆ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಒಟಿಪಿ ನಂಬರ್ ಪಡೆಯಲು ಹರಸಾಹಸ ಪಡಬೇಕಾಗಿದೆ.

‘ಕೊಪ್ಪ ಕಡೆಯಿಂದ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾದಾಗ, ತಾಲ್ಲೂಕಿನ ಗಡಿ ಭಾಗವಾಗಿದ್ದರಿಂದ ಗಡಿಕಲ್‍ಗೆ ತೀರ್ಥಹಳ್ಳಿ ಕಡೆಯಿಂದ ವಿದ್ಯುತ್ ಪೂರೈಸಿದರೆ ಪಡಿತರ ಪಡೆಯಲು ಅಡ್ಡಿಯಾಗುವ ವಿದ್ಯುತ್, ನೆಟ್‍ವರ್ಕ್ ಸಮಸ್ಯೆಯನ್ನು ಸಾಧ್ಯವಾ ದಷ್ಟು ನಿವಾರಿಸಲು ಸಾಧ್ಯವಾಗಲಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿದರೆ ಉತ್ತಮ’ ಎಂದು ಪಡಿತರದಾರರೊಬ್ಬರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು