ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಪಕ್ಷಗಳು ರಾಷ್ಟ್ರದ ಜೀವಾಳ

ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಎಚ್‌.ಡಿ. ದೇವೇಗೌಡ
Last Updated 10 ಮೇ 2022, 4:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಈ ರಾಷ್ಟ್ರದಲ್ಲಿ ಆಳ್ವಿಕೆ ನಡೆಸಲು ಆಗಲ್ಲ’ ಎಂದುಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ವತಿಯಿಂದ ಎಐಟಿ ವೃತ್ತದ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಹಿಂದೂಸ್ತಾನದಲ್ಲಿ ಬಿಜೆಪಿ ಹೊರತಾಗಿ ಎಲ್ಲ ಕಡೆ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಜೆಡಿಎಸ್‌ ಪಕ್ಷವನ್ನು ಉಳಿಸಬೇಕು ಎಂಬ ಆಸೆ ಇದೆ. ಪಕ್ಷವನ್ನು ಸದೃಢಗೊಳಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಇದೇ 13ರಂದು ಜನತಾ ಜಲಧಾರೆ ಕಾರ್ಯಕ್ರಮ ಇದೆ. ಅದು ಮುಗಿದ ನಂತರ, ಎಲ್ಲ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಈ ಜಿಲ್ಲೆಯಲ್ಲೂ ಒಂದು ಇಡೀ ದಿನ ಸಭೆ ನಡೆಸುತ್ತೇನೆ’ ಎಂದು ಹೇಳಿದರು.

‘ರಾಜಕಾರಣದಲ್ಲಿ ಸುದೀರ್ಘವಾಗಿ ದುಡಿದಿದ್ದೇನೆ. ಪಕ್ಷಾಂತರ ಎಂದೂ ಮಾಡಿಲ್ಲ. ಪಕ್ಷ ಸದೃಢಗೊಳಿಸುವ ಶಕ್ತಿ ಇದೆ. ಪಕ್ಷದಲ್ಲಿ ಎಲ್ಲರಿಗಿಂತ ಕಾರ್ಯ ಕರ್ತರು ಮುಖ್ಯ. ಪಕ್ಷ ಬಲಪಡಿಸಲು ನಿಮ್ಮೆಲ್ಲರ ಸಹಕಾರ ಬೇಕು’ ಎಂದು ಕೋರಿದರು.

‘ಒಂದೊಮ್ಮೆ ಈ ಜಿಲ್ಲೆಯಲ್ಲಿ ಜೆಡಿಎಸ್‌ನ ನಾಲ್ವರು ಶಾಸಕರು ಇದ್ದರು. ಆ ದಿನಗಳು ಮತ್ತೆ ಮರುಕಳಿಸುವಂತೆ ಮಾಡಲು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶ, ರಾಜ್ಯದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳು ಗೊತ್ತು. ಎರಡು ರಾಷ್ಟ್ರೀಯ ಪಕ್ಷಗಳ ಚಟುವಟಿಕೆಗಳು ತಿಳಿದಿವೆ. ಕರ್ನಾಟಕದಲ್ಲಿ ದರಿದ್ರ ಸರ್ಕಾರ ಇದೆ ಎಂದು ಹಲವರು ಹೀಗಳೆಯುವುದನ್ನು ಕೇಳಿದ್ದೇನೆ. ಈ ಸರ್ಕಾರವನ್ನು ತಂದವರು ಯಾರು, ಅದಕ್ಕೆ ಕೈಜೋಡಿಸಿದ 16 ಶಾಸಕರು ಯಾರು, ಅವರನ್ನು ಕಳಿಸಿಕೊಟ್ಟವರು ಯಾರು ಎಂಬದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

ದೇವೇಗೌಡ ಅವರು ಏನು ಮಾಡಿ ದ್ದಾರೆ ಎಂಬುದು ಜನರಿಗೆ ತಿಳಿದಿದೆ. ನಾನೊಬ್ಬ ರೈತನ ಮಗ ಬಡತನದ ಬೇಗೆ ಏನು ಎಂಬುದು ಗೊತ್ತಿದೆ. ಬದುಕಿನುದ್ದಕೂ ನೀರಾವರಿಗಾಗಿ ಮಾತ್ರ ಹೋರಾಟ ಮಾಡಿಲ್ಲ. ಎಲ್ಲ ಕ್ಷೇತ್ರಗಳು, ಸಮುದಾಯಗಳ ಏಳಿಗೆಗೆ ಹೋರಾಟ ಮಾಡಿದ್ದೇನೆ ಎಂದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಶ್ರಮಪಟ್ಟು ಜಲಧಾರೆ ಕಾರ್ಯಕ್ರಮ ಮಾಡಿದ್ದಾರೆ. ಅದನ್ನು ಯಶಸ್ವಿಗೊಳಿಸಲು ಪಕ್ಷದ ಎಲ್ಲರೂ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ‘ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸ್ವರೂಪ ಭಿನ್ನವಾಗಿದೆ. ಮಲೆನಾಡು, ಬಯಲು ಸೀಮೆ ಇಲ್ಲಿವೆ. ಕ್ಷೇತ್ರಗಳ ‘ಫಿಸಿಕ್ಸ್‌’ ಮತ್ತು ‘ಕೆಮಿಸ್ಟ್ರಿ’ ಇದೆಲ್ಲದರ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಬೇಕು’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಚಂದ್ರಪ್ಪ, ತಿಮ್ಮಶೆಟ್ಟಿ, ಮಂಜಪ್ಪ, ಎಚ್‌.ಜಿ.ವೆಂಕಟೇಶ್‌, ಹೊಲದಗದ್ದೆ ಗಿರೀಶ್‌, ಸೋನಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT