ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮೂರು ಪಕ್ಷಗಳನ್ನು ತಿರಸ್ಕರಿಸಿ: ರವಿಕೃಷ್ಣ ರೆಡ್ಡಿ

Published 1 ಮಾರ್ಚ್ 2024, 14:20 IST
Last Updated 1 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಭ್ರಷ್ಟಾಚಾರ, ಅಪ್ರಾಮಾಣಿಕತೆ‌, ಸ್ವಜನ ಪಕ್ಷಪಾತ, ಅನೈತಿಕ ನಡವಳಿಕೆ, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮನವಿ ಮಾಡಿದರು.

‘ಕರ್ನಾಟಕಕ್ಕಾಗಿ ನಾವು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಕೆಆರ್‌ಎಸ್‌ ಪಕ್ಷ ನಡೆಸುತ್ತಿರುವ ಬೈಕ್ ರ್‍ಯಾಲಿ ಶುಕ್ರವಾರ ನಗರ ತಲುಪಿತು. ಆಜಾದ್ ಪಾರ್ಕ್ ವೃತ್ತದಲ್ಲಿ ಸಭೆಯನ್ನು ಉದ್ದೇಶಿಸಿದ ಅವರು ಮಾತನಾಡಿದರು.

ಭ್ರಷ್ಟಾಚಾರದ ವಿರುದ್ಧ ಅಣ್ಣ ಹಾಜಾರೆ, ಎಸ್.ಆರ್.ಹಿರೇಮಠ, ಎಚ್.ಎಸ್.ದೊರೆಸ್ವಾಮಿ ಸೇರಿ ಹಲವರು ಹೋರಾಟ ನಡೆಸಿದ್ದರ ಫಲವಾಗಿ ಸಿದ್ದರಾಮಯ್ಯ ಮೊದಲ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾದರು. ಬಳಿಕ ಅವರು ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಂಶ ರಾಜಕಾರಣ ಇರಲಿಲ್ಲ. ಈಗ ಮೋಟಮ್ಮ ಅವರು ತಮ್ಮ ಮಗಳನ್ನು ಶಾಸಕಿಯನ್ನಾಗಿ ಮಾಡುವ ಮೂಲಕ ವಂಶ ರಾಜಕಾರಣವನ್ನು ಜಿಲ್ಲೆಗೆ ತಂದಿದ್ದಾರೆ ಎಂದರು.

‘ಮೊದಲ ಬಾರಿಗೆ ಸಿ.ಟಿ.ರವಿ ಶಾಸಕರಾದಾಗ ಪ್ರಾಮಾಣಿಕ, ದೇಶಪ್ರೇಮಿ ಎಂದು ಭಾವಿಸಿದ್ದೆವು. ಜನಸಾಮಾನ್ಯರಿಗೆ ಅನುಕೂಲ ಆಗುವ ತಾಲ್ಲೂಕು ಕಚೇರಿ ಕಟ್ಟಡ 10 ವರ್ಷವಾದರೂ ಪೂರ್ಣವಾಗಲಿಲ್ಲ. ಇಲ್ಲಿಗೆ ಸಮೀಪದಲ್ಲೇ ಇರುವ ಸಿ.ಟಿ.ರವಿ ಅವರ ಬಂಗಲೆ ಬಹುಬೇಗನೆ ಎದ್ದು ನಿಂತಿತ್ತು. ಆಗ ಅವರು ಎಷ್ಟರ ಮಟ್ಟಿನ ಪ್ರಮಾಣಿಕ ಎಂಬುದು ತಿಳಿಯಿತು’ ಎಂದು ಟೀಕಿಸಿದರು.

ಕೆಆರ್‌ಎಸ್‌ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ, ‘ಭ್ರಷ್ಟಾಚಾರ, ಸ್ವಜನಪಕ್ಷಪಾತದೊಂದಿಗೆ ನಿರಂತರ ದ್ರೋಹ ಮಾಡುತ್ತಿರುವ ಮೂರು ‌ಪಕ್ಷಗಳನ್ನು ಜನ ತಿರಸ್ಕರಿಸಬೇಕು. ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕೆಆರ್‌ಎಸ್ ಬೆಂಬಲಿಸಬೇಕು. ಈ ಕುರಿತು ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT