ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಗದ್ದೆ | ಮೀಸಲು ಅರಣ್ಯ: ಗಡಿಕಲ್ಲು ಕಿತ್ತೆಸೆದು ಗ್ರಾಮಸ್ಥರ ಆಕ್ರೋಶ

ಸಮಸ್ಯೆ ಬಗೆಹರಿಸಲು ಫೆ.12ರ ಗಡುವು, ಇಲ್ಲದಿದ್ದರೆ ಪ್ರತಿಭಟನೆ ಎಚ್ಚರಿಕೆ
Published 30 ಜನವರಿ 2024, 13:20 IST
Last Updated 30 ಜನವರಿ 2024, 13:20 IST
ಅಕ್ಷರ ಗಾತ್ರ

ಹಿರೇಗದ್ದೆ(ಬಾಳೆಹೊನ್ನೂರು): ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವಸತಿ ಒಳಗೊಂಡಿರುವ 302 ಎಕರೆ ಪ್ರದೇಶವನ್ನು ಸರ್ಕಾರ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಿರುವುದರಿಂದ, ಭವಿಷ್ಯದಲ್ಲಿ ಜನಸಾಮಾನ್ಯರ ಬದುಕು ಬೀದಿಗೆ ಬೀಳಲಿದೆ ಎಂದು ವಕೀಲ ಸುಭಾಷ್ ಆಕ್ರೋಶ ವ್ಯಕ್ತಪಡಿಸಿದರು.

ಹಿರೇಗದ್ದೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜನವಸತಿ ಪ್ರದೇಶದಲ್ಲಿ ಗಡಿ ಕಲ್ಲುಗಳನ್ನು ಹಾಕಿದ್ದನ್ನು ವಿರೋಧಿಸಿ ಗ್ರಾಮಸ್ಥರು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಅರಣ್ಯ ಇಲಾಖೆಯ ಕೊಪ್ಪ ಉಪ ವಿಭಾಗದ 22,451 ಎಕರೆ ಪ್ರದೇಶ ಅಧಿಸೂಚನೆ ಆಗಿದ್ದು, ಮುಂದಿನ ದಿನಗಳಲ್ಲಿ ಮೀಸಲು ಅರಣ್ಯ ಎಂದು ಘೋಷಿಸಲು ಸಿದ್ಧತೆ ನಡೆದಿದೆ.

‘ಕಾಡನ್ನು ರಕ್ಷಿಸಲು ನಮ್ಮ ವಿರೋಧವಿಲ್ಲ. ಆದರೆ, 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ, ಎಲ್ಲ ದಾಖಲೆಗಳು ಇರುವ ಜಮೀನನ್ನು ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿಸಿರುವುದು ಖಂಡನೀಯ. 80 ಜನ ಸಾಗುವಳಿದಾರರು ಕಡೂರಿಗೆ ತೆರಳಿ ಫಾರೆಸ್ಟ್ ಸೆಟ್ಲಮೆಂಟ್ ಅಧಿಕಾರಿಗೆ ದಾಖಲೆ ಸಹಿತ ತಕರಾರು ಅರ್ಜಿ ಸಲ್ಲಿಸಿದ್ದರೂ ಅಧಿಸೂಚನೆಯಿಂದ ಜಮೀನುಗಳನ್ನು ಕೈ ಬಿಟ್ಟಿಲ್ಲ. ಪಹಣಿ, ಹಕ್ಕುಪತ್ರ ಹೊಂದಿದ ಬೆಳೆಗಾರರು ತಮ್ಮ ಜಮೀನಿನ ಮೇಲೆ ಬೆಳೆ ಸಾಲ ಪಡೆದಿದ್ದಾರೆ. ಅದನ್ನು ವಶಪಡಿಸಿಕೊಳ್ಳಲು ಇಲಾಖೆ ಮುಂದಾಗಿದೆ.ಈ ಸಮಸ್ಯೆಯನ್ನು ಅಧಿಕಾರಿಗಳು,ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸಿ ಫೆ.12ರೊಳಗೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಫೆ.15ರಿಂದ ಮುಖಂಡ ಬಿ.ಎಂ.ಸುದೇವ್ ನೇತೃತ್ವದಲ್ಲಿ ಕೊಪ್ಪದ ಡಿಎಫ್‌ಒ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಬಿ.ಎಂ.ಸುದೇವ್ ಮಾತನಾಡಿ, ‘ನೂರಾರು ವರ್ಷಗಳ ಇತಿಹಾಸ ಇರುವ ದೇವಸ್ಥಾನವನ್ನೂ ಅರಣ್ಯ ಇಲಾಖೆ, ಮೀಸಲು ಅರಣ್ಯದ ವ್ಯಾಪ್ತಿಗೆ ಸೇರಿಸಿದೆ. ಜಮೀನಿಗೆ ಭೇಟಿ ನೀಡಿ, ಪರಿಶೀಲಿಸಿ ನಿರ್ದಿಷ್ಟವಾಗಿ ಸರ್ವೆ ನಡೆಸದೆ ಕಚೇರಿಯಲ್ಲೇ ಕುಳಿತು ದಾಖಲೆ ತಯಾರಿಸಿದ್ದಾರೆ. ಸರ್ಕಾರದಿಂದ ಸರ್ವೆ ಹೆಸರಿನಲ್ಲಿ ₹ 20ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾರೆ.  ಅಧಿಕಾರಿಗಳು ಜನವಸತಿ ಇರುವ ಇಡೀ ಊರನ್ನೇ ಕಾಡು ಮಾಡಲು ಹೊರಟಿದ್ದಾರೆ. ತಕ್ಷಣ ಜನವಸತಿ ಇರುವ ಜಾಗವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಮುಖಂಡ ಕುಕ್ಕೊಡಿಗೆ ರವೀಂದ್ರ, ಹಿರೇಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಸಾಗರ್, ದಯಾನಂದ್, ಅಡಿಗೆಬೈಲು, ಹಿರೇಗದ್ದೆ ಗ್ರಾಮಸ್ಥರು ಭಾಗವಹಿಸಿದ್ದರು.

ಗಡಿಕಲ್ಲುಗಳನ್ನು ಕಿತ್ತು ಎಸೆದಿರುವುದು
ಗಡಿಕಲ್ಲುಗಳನ್ನು ಕಿತ್ತು ಎಸೆದಿರುವುದು

‘ಕಚೇರಿಯಲ್ಲಿ ಕುಳಿತು ಸರ್ವೆ’

ಈ ಭಾಗದ ಅರಣ್ಯವನ್ನು ಪ್ರಹ್ಲಾದ್ ಎಂಬ ಅಧಿಕಾರಿ ಸರ್ವೆ ಮಾಡಿದ್ದಾರೆ.ಅವರು ನಮ್ಮ ವ್ಯಾಪ್ತಿಗೆ ಬಂದ ಬಗ್ಗೆ ನಮೂದಿಸಿರುವ ದಿನಚರಿಯ ಪ್ರತಿಯನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದಾಗ ‘ಅದು ಲಭ್ಯವಿಲ್ಲ’ ಎಂಬ ಉತ್ತರ ಬಂದಿದೆ.ಅಧಿಕಾರಿ ಕಚೇರಿಯಲ್ಲೇ ಕುಳಿತು ದಾಖಲೆ ಸಿದ್ಧಪಡಿಸಿದ್ದಾರೆ ಎಂಬುದಕ್ಕೆ ಇದು ಉದಾಹರಣೆ’ ಎಂದು ವಕೀಲ ಸುಭಾಷ್‌ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT