ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆಗೆ ಕಾಲುಸಂಕವೇ ದಾರಿ: ಮಳೆಗಾಲದಲ್ಲಿ ಪರಿಶಿಷ್ಟ ಪಂಗಡ ಕುಟುಂಬದ ಸಂಕಟ

Published 9 ಜುಲೈ 2024, 7:37 IST
Last Updated 9 ಜುಲೈ 2024, 7:37 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ತರುವೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ನೂರಾರು ಎಕರೆ ಕೃಷಿಭೂಮಿ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಪಾಳುಬಿದ್ದಿದೆ. ಪರಿಶಿಷ್ಟ ಪಂಗಡದ ಕುಟುಂಬವೊಂದು ಮಳೆಗಾಲದಲ್ಲಿ ಮನೆ ತಲುಪಲು ಸಾಧ್ಯವಾಗದೇ ಕಂಗಾಲಾಗಿದೆ.

ಕೊಟ್ಟಿಗೆಹಾರದ ತರುವೆ ಗ್ರಾಮದ ಸುರೇಶ್ ನಾಯ್ಕ್ ಅವರ ಕುಟುಂಬ ಹೇಮಾವತಿಯ ಉಪನದಿ ಸೋಮಾವತಿಯ ಸಮೀಪ ಇದೆ. ಈ ನದಿ ಮಳೆಗಾಲದಲ್ಲಿ ತುಂಬಿ ಹರಿದು ಹೇಮಾವತಿಯನ್ನು ಸೇರುತ್ತದೆ. ಅದರ ಮತ್ತೊಂದು ಮಗ್ಗುಲಿನಲ್ಲಿರುವ ಸುರೇಶ್ ನಾಯ್ಕ್ ಕುಟುಂಬ ಅನೇಕ ವರ್ಷದಿಂದ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಇಲ್ಲದೆ ಜೀವನ ನಡೆಸುತ್ತಿದೆ. ಮರದ ದಿಮ್ಮಿ ಜೋಡಿಸಿ ನಿರ್ಮಿಸಿರುವ ಅಪಾಯಕಾರಿ ಕಾಲುಸಂಕ ದಾಟಿ ಮನೆ ಸೇರುವುದು ಅವರಿಗೆ ಅನಿವಾರ್ಯವಾಗಿದೆ.

ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಮೂರು ವರ್ಷದಿಂದ ಸಂತ್ರಸ್ತ ಸುರೇಶ್ ಕುಟುಂಬ ಮನವಿ ಮಾಡುತ್ತಲೇ ಬಂದಿದೆ. ಆದರೆ ಕಾಲುಸಂಕ ಬದಲಾಗಿಲ್ಲ. ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಸರ್ಕಾರದ ಸವಲತ್ತು ಬಳಸಿಕೊಂಡು ಸೇತುವೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಕೂಡ ಒತ್ತಾಯಿಸುತ್ತಿದ್ದಾರೆ. ಸೇತುವೆ ನಿರ್ಮಾಣ ಆದರೆ ಕೃಷಿಕರ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಿಕ್ಕಿದಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.

ತರುವೆ ಗ್ರಾಮದ ಸುರೇಶ್ ನಾಯ್ಕ್ ಕುಟುಂಬ ಜೀವ ಭಯದಲ್ಲೇ ಕಾಲು ಸಂಕದ ಮೇಲೆ ನಿಂತಿರುವುದು
ತರುವೆ ಗ್ರಾಮದ ಸುರೇಶ್ ನಾಯ್ಕ್ ಕುಟುಂಬ ಜೀವ ಭಯದಲ್ಲೇ ಕಾಲು ಸಂಕದ ಮೇಲೆ ನಿಂತಿರುವುದು
ತರುವೆ ಗ್ರಾಮದ ಸುರೇಶ್ ನಾಯ್ಕ್ ಅವರ ಮನೆ ಸೋಮಾವತಿ ಹಳ್ಳದ ಮತ್ತೊಂದು ಬದಿಯಲ್ಲಿ ಕಾಣುತ್ತಿರುವುದು
ತರುವೆ ಗ್ರಾಮದ ಸುರೇಶ್ ನಾಯ್ಕ್ ಅವರ ಮನೆ ಸೋಮಾವತಿ ಹಳ್ಳದ ಮತ್ತೊಂದು ಬದಿಯಲ್ಲಿ ಕಾಣುತ್ತಿರುವುದು
ಒಂದು ಎರಡಲ್ಲ ಕಿರು ಸೇತುವೆ ನಿರ್ಮಿಸಿ ಕೊಡಿ ಎಂದು ಮೂರು ವರ್ಷಗಳಿಂದ ಅಧಿಕಾರಿಗಳಿಗೂ ಶಾಸಕರಿಗೂ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಯಾವ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಕಡೆಗೆ ಗಮನ ಹರಿಸಿದರೆ ಸಮಸ್ಯೆ ಬಗೆಹರಿಯುತ್ತಿತ್ತು.
ಸುರೇಶ್ ನಾಯ್ಕ್ ಕೊಟ್ಟಿಗೆಹಾರ ನಿವಾಸಿ
ಸುರೇಶ್ ನಾಯ್ಕ್ ಅವರ ಸಮಸ್ಯೆ ಏನೆಂದು ಗಮನಕ್ಕೆ ಬಂದಿದೆ. ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲಿಂದ ಯಾವುದೇ ರೀತಿಯಲ್ಲಿ ಪ್ರತಿಕ್ರೀಯೆ ಬಂದಿಲ್ಲ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ.
ಬಿ.ಎಂ.ಸತೀಶ್ ತರುವೆ ಗ್ರಾ.ಪಂ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT