ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಾಲ’ದಲ್ಲಿ ಶೇ 98.9 ಪ್ರಗತಿ

ದೇವನೂರಿನಲ್ಲಿ ‘ಗ್ರಾಮ ಒನ್’ ಯೋಜನೆಗೆ ಚಾಲನೆ ನೀಡಿದ ಸಚಿವ ಸುರೇಶ್‌ಕುಮಾರ್
Last Updated 18 ಏಪ್ರಿಲ್ 2021, 5:11 IST
ಅಕ್ಷರ ಗಾತ್ರ

ಕಡೂರು: ಗ್ರಾಮೀಣ ಜನರಿಗೆ ಸರ್ಕಾರದ ಯೋಜನೆಗಳು ಮತ್ತು ಅಗತ್ಯ ಸೇವೆಗಳನ್ನು ವಿಳಂಬವಿಲ್ಲದೆ, ಒಂದೇ ಸೂರಿನಡಿ ಕಲ್ಪಿಸುವುದು ‘ಗ್ರಾಮ ಒನ್’ ಯೋಜನೆಯ ಉದ್ದೇಶ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ದೇವನೂರಿನಲ್ಲಿ ಶನಿವಾರ ‘ಗ್ರಾಮ ಒನ್’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜನರಿಗೆ ನೇರವಾಗಿ ಸೇವೆಗಳನ್ನು ಕಲ್ಪಿಸುವ ಯೋಜನೆ ಸಕಾಲ. ರಾಜ್ಯದಲ್ಲಿ 24.15 ಕೋಟಿಗೂ ಹೆಚ್ಚು ಅರ್ಜಿಗಳು ಸಕಾಲದಲ್ಲಿ ಸಲ್ಲಿಕೆಯಾಗಿವೆ. ಇವುಗಳಲ್ಲಿ ಶೇ 98.9 ಅರ್ಜಿಗಳು ವಿಲೇವಾರಿಯಾಗಿವೆ. ಸಕಾಲ ಯೋಜನೆಗೆ ಪ್ರೇರಣೆ ನೀಡಿದ್ದು ಚಿಕ್ಕಮಗಳೂರು ಜಿಲ್ಲೆ. ಇಲ್ಲಿ 49.16 ಲಕ್ಷ ಸಕಾಲ ಅರ್ಜಿಗಳು ಸಲ್ಲಿಕೆಯಾಗಿದ್ದು, 49.09 ಲಕ್ಷ ಅರ್ಜಿಗಳು ವಿಲೇವಾರಿಯಾಗಿವೆ. ಶೇ 98.90ರಷ್ಟು ಪ್ರಗತಿಯಾಗಿವೆ ಎಂದು ತಿಳಿಸಿದರು.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈ ಯೋಜನೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ದೂರದರ್ಶಿತ್ವವುಳ್ಳ ಗ್ರಾಮ ಒನ್ ಯೋಜನೆ ರಾಜಕೀಯ ವಿವಾದದ ಕೇಂದ್ರವಾಗದೆ, ವಿಶ್ವಾಸದ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂವಿತಾ, ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ, ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾಬಾಯಿ ಕೃಷ್ಣಮೂರ್ತಿ, ಸದಸ್ಯರಾದ ಜಿಗಣೇಹಳ್ಳಿ ಮಂಜು ಮತ್ತು ಗೌರಮ್ಮ ಬಸವರಾಜು, ತಹಶೀಲ್ದಾರ್ ಉಮೇಶ್ ಇದ್ದರು.

ಕಾಲೇಜಿಗೆ ಭೇಟಿ: ಲಕ್ಷ್ಮೀಶ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

‘ಪರೀಕ್ಷೆ ಮಾಡದೆ ವಿದ್ಯಾರ್ಥಿಗಳನ್ನು ಪಾಸು ಮಾಡುವ ಬಗ್ಗೆ ಏನು ಹೇಳ್ತೀಯಮ್ಮಾ’ ಎಂದು ಸಚಿವರು ಕಲಾ ವಿಭಾಗದ ದ್ವಿತೀಯ ಪಿಯು ವಿದ್ಯಾರ್ಥಿನಿ ಮಿಸ್ಬಾ ಮಹೇಖ್ ಅವರನ್ನು ಪ್ರಶ್ನಿಸಿದಾಗ, ‘ಬೇಡ ಸರ್, ಓದಿದವರಿಗೆ ಅನ್ಯಾಯವಾಗುತ್ತದೆ’ ಎಂದರು. ‘ಓದದಿರುವವರ ಬಗ್ಗೆ ನಿನಗೆ ಪ್ರೀತಿಯಿಲ್ಲವೇನಮ್ಮ’ ಎಂದು ಸಚಿವರು ಚಟಾಕಿ ಹಾರಿಸಿದರು. ವಿದ್ಯಾರ್ಥಿಗಳ ಜೊತೆ ಸಚಿವರು ಆತ್ಮೀಯವಾಗಿ ಮಾತನಾಡಿದರು.

‘ಮೊದಲ ಹಂತದ ಯೋಜನೆಗೆ ಟೆಂಡರ್’
ಕರಗಡ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಸಿ.ಟಿ.ರವಿ, ‘ಕರಗಡ ಯೋಜನೆ ಯಶಸ್ವಿಯಾಗದಿರಲು ತಾಂತ್ರಿಕ ತೊಂದರೆ ಕಾರಣ. ಭದ್ರಾ ಉಪಕಣಿವೆ ಯೋಜನೆಯ ಮೂಲಕ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನ ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ಟೆಂಡರ್ ಮುಗಿದಿದೆ. ಟೀಕೆ ಮಾಡುವವರು ಅಭಿವೃದ್ಧಿ ಕೆಲಸಗಳ ಅವಲೋಕನ ಮಾಡಿಕೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT